ಭದ್ರಾವತಿ ನ್ಯೂಟೌನ್‌ನಲ್ಲಿರುವ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಿವಾಸದಲ್ಲಿ ಕಳೆದ ೨ ದಿನಗಳ ಹಿಂದೆ ಜೆಡಿಎಸ್ ಪಕ್ಷದ ನಗರಸಭೆ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಸಭೆ ನಡೆಸಲಾಯಿತು.
ಭದ್ರಾವತಿ, ಮಾ. ೧೫: ಇತ್ತೀಚೆಗೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯೊಂದಿಗೆ ೨-೩ ದಶಕಗಳಿಂದ ಗುರುತಿಸಿಕೊಂಡಿದ್ದ ಪ್ರಮುಖರು ಒಂದೆಡೆ ಪಕ್ಷ ತೊರೆದಿರುವುದು ಹಿನ್ನಡೆಗೆ ಕಾರಣವಾಗಿದೆ. ಮತ್ತೊಂದೆಡೆ ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಬಿರುಸಿನ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ.
ಇತ್ತೀಚೆಗೆ ಜೆಡಿಎಸ್ ಪಕ್ಷ ತೊರೆದಿರುವ ಕೆಲವರು ಅಪ್ಪಾಜಿ ವರ್ಚಸ್ಸಿನಲ್ಲಿ ರಾಜಕೀಯ ಮಾಡುತ್ತಿದ್ದರು. ಅವರು ವೈಯಕ್ತಿಕವಾಗಿ ಯಾವುದೇ ವರ್ಚಸ್ಸನ್ನು ಸಂಪಾದಿಸಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಶಾರದ ಅಪ್ಪಾಜಿಯವರು ಕ್ರಿಯಾಶೀಲವಾಗಿ ಮುನ್ನಡೆಯುತ್ತಿದ್ದಾರೆ. ಈಗಾಗಲೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಕ್ಷೇತ್ರದಲ್ಲಿ ಹಲವು ಮಂದಿ ಮುಂದಿದ್ದಾರೆ. ಆದರೆ ಅವರನ್ನು ಈಗಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇಬ್ರಾಹಿಂ ಸೇರ್ಪಡೆ ಪಕ್ಷಕ್ಕೆ ಲಾಭವೇ ಹೊರತು ನಷ್ಟವಿಲ್ಲ.
- ಆರ್. ಕರುಣಾಮೂರ್ತಿ, ಅಧ್ಯಕ್ಷರು, ಜೆಡಿಎಸ್ , ಭದ್ರಾವತಿ.
ಅಪ್ಪಾಜಿ ಅವರೊಂದಿಗೆ ೨-೩ ದಶಕಗಳಿಂದ ಗುರುತಿಸಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭೆ ಮಾಜಿ ಸದಸ್ಯ ಬದರಿನಾರಾಯಣ, ಮುಸ್ಲಿಂ ಸಮುದಾಯದ ಫೀರ್‌ಷರೀಫ್, ಶಿವಮಾಧು ಸೇರಿದಂತೆ ಇನ್ನಿತರ ಪ್ರಮುಖರು ಪಕ್ಷ ತೊರೆದಿರುವುದು ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನುಂಟು ಮಾಡಿದೆ. ಇದು ಈಗಾಗಲೇ ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ಶಾರದ ಅಪ್ಪಾಜಿಗೆ ತಲೆ ನೋವಾಗಿ ಪರಿಣಮಿಸಿದೆ. ಆದರೂ ಸಹ ಯಾವುದನ್ನು ಲೆಕ್ಕಿಸದೆ ಶಾರದ ಅಪ್ಪಾಜಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈಗಾಗಲೇ ಶಾರದ ಅಪ್ಪಾಜಿ ಗ್ರಾಮಾಂತರ ಭಾಗದಲ್ಲಿ ಪಕ್ಷ ಸಂಘಟನೆ ಜೊತೆಗೆ ೨-೩ ಬಾರಿ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಿದ್ದಾರೆ. ಇದೀಗ ನಗರಸಭೆ ೩೫ ವಾರ್ಡ್‌ಗಳಲ್ಲಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಮುಂದಾಗಿದ್ದು, ಕಳೆದ ೨ ದಿನಗಳ ಹಿಂದೆ ಪಕ್ಷದ ನಗರಸಭೆ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ಹೆಚ್ಚಿನ ಗಮನ ನೀಡುವಂತೆ ಮನವಿ ಮಾಡಿದ್ದಾರೆ.
ಸಿ.ಎಂ ಇಬ್ರಾಹಿಂ ಸೇರ್ಪಡೆ ಯಾವುದೇ ನಷ್ಟವಿಲ್ಲ:
ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವುದು. ಸ್ಥಳೀಯವಾಗಿ ಹೆಚ್ಚಿನ ಪರಿಣಾಮವನ್ನುಂಟು ಮಾಡಲಿದ್ದು, ಇವರ ಸೇರ್ಪಡೆ ಪಕ್ಷ ಸಂಘಟನೆಗೆ ಯಾವುದೇ ಹಿನ್ನಡೆಯನ್ನುಂಟು ಮಾಡುವುದಿಲ್ಲ. ಬದಲಿಗೆ ಲಾಭವಾಗಲಿದೆ ಎಂಬುದು ಸ್ಥಳೀಯ ಮುಖಂಡರ ಅಭಿಪ್ರಾಯವಾಗಿದೆ.
ಸಿ.ಎಂ ಇಬ್ರಾಹಿಂರವರು ರಾಜ್ಯಮಟ್ಟದ ನಾಯಕರಾಗಿದ್ದು, ಈಗಾಗಲೇ ಕ್ಷೇತ್ರದಲ್ಲಿ ಶಾರದ ಅಪ್ಪಾಜಿಯನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಇಬ್ರಾಹಿಂರವರು ಶಾರದ ಅಪ್ಪಾಜಿ ಬೆಂಬಲಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಇವರ ಅಭಿಮಾನಿಗಳು, ಹಿತೈಷಿಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಗೆಲುವಿಗಾಗಿ ಶ್ರಮಿಸುತ್ತಾರೆಂಬ ವಿಶ್ವಾಸವನ್ನು ಮುಖಂಡರು ಹೊಂದಿದ್ದಾರೆ.
No comments:
Post a Comment