ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಮಾತನಾಡಿದರು.
ಭದ್ರಾವತಿ, ಸೆ. ೨೯: ಇಂದಿನ ಆಧುನಿಕ ಒತ್ತಡದ ಜೀವನ ಶೈಲಿ ಹಾಗು ಆಹಾರ ಪದ್ದತಿ ಬಹಳಷ್ಟು ರೀತಿಯ ಅನಾರೋಗ್ಯಗಳಿಗೆ ಕಾರಣಗಳಾಗುತ್ತಿವೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದರು.
ಅವರು ಬುಧವಾರ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಒತ್ತಡದ ಜೀವನ ಶೈಲಿ ಜೊತೆಗೆ ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳು ಸಹ ಅನಾರೋಗ್ಯಕ್ಕೆ ಕಾರಣಗಳಾಗುತ್ತಿವೆ. ಇಂದು ಹೃದಯ ಸಂಬಂಧಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ರೋಗಗಳು ತಕ್ಷಣಕ್ಕೆ ಕಂಡು ಬರುತ್ತಿಲ್ಲ. ಉಲ್ಬಣವಾದ ನಂತರ ಕಂಡು ಬರುವುದರಿಂದ ಚಿಕಿತ್ಸೆ ನೀಡುವುದು ಬಹಳ ಕಷ್ಟ. ನಿಶ್ಯಕ್ತಿ, ನಡೆದಾಡಲು, ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದು ಹಾಗು ಆಯಾಸವಾಗುವ ಲಕ್ಷಣ ಕಂಡು ಬಂದಲ್ಲಿ ಅದು ನಿಶ್ಚಿತವಾಗಿ ಹೃದಯ ಖಾಯಿಲೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಾಗ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಶಸ್ತ್ರ ಚಿಕಿತ್ಸಕ ಡಾ.ಶಿವಪ್ರಕಾಶ್ ಮಾತನಾಡಿ, ಹೃದಯ ಸಂಬಂಧಿ ಹಾಗು ಮಧುಮೇಹ ಈ ಎರಡು ರೋಗಗಳನ್ನು ಸಹ ಗಂಭೀರವಾಗಿ ಪರಿಗಣಿಸಬೇಕು. ಮಧುಮೇಹ ಕಾಣಿಸಿಕೊಂಡವರಲ್ಲಿ ಸಹಜವಾಗಿ ಹೃದಯ ಸಂಬಂಧಿ ರೋಗಗಳು ಸಹ ಕಾಣಿಸಿಕೊಳ್ಳಲಿವೆ. ಉತ್ತಮ ಆರೋಗ್ಯಕರ ಜೀವನ, ಹಿತಮಿತವಾದ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದು ಇತ್ಯಾದಿ ಕ್ರಮಗಳಿಂದ ಆರೋಗ್ಯ ರಕ್ಷಿಸಿಕೊಳ್ಳಲು ಸಾಧ್ಯ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಸಾಂಕ್ರಾಮಿಕ ರೋಗಗಳು ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಆದರೆ ಆಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ. ರೋಗಗಳು ಕಾಣಿಸಿಕೊಂಡು ಚಿಕಿತ್ಸೆ ಪಡೆಯುವ ಬದಲು ಅವುಗಳು ಕಾಣಿಸಿಕೊಳ್ಳದಂತೆ ಎಚ್ಚರವಹಿಸುವುದು ಬಹಳ ಮುಖ್ಯ ಎಂದರು.
ಶ್ರಮರಹಿತ ಚಟುವಟಿಕೆಗಳು, ರಾಸಾಯನಿಕಯುಕ್ತ ಆಹಾರಗಳು, ಬೇಕರಿ ಪದಾರ್ಥಗಳ ಸೇವನೆಯಿಂದ ಹಲವಾರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಎಚ್ಚರವಹಿಸುವುದು ಅವಶ್ಯಕ ಎಂದರು.
ಎನ್‌ಸಿಡಿ ಘಟಕದ ವೈದ್ಯಾಧಿಕಾರಿ ಡಾ.ಎಂ ರವೀಂದ್ರನಾಥ ಕೋಠಿ ಪ್ರಸ್ತಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ರೋಗಗಳಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 'ವಿಶ್ವ ಹೃದಯ ದಿನ' ಆಚರಿಸಲಾಗುತ್ತಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ವಿ ಆದರ್ಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್ ಬಾಬು, ನಾಗೇಶ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ಹಾಗು ರಕ್ತ ತಪಾಸಣೆ ನಡೆಸಲಾಯಿತು. ಬಿ.ಆರ್ ಯಶೋಧ ಪ್ರಾರ್ಥಿಸಿದರು. ನಾಗರಾಜ ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ವೀರಪ್ಪ ವಂದಿಸಿದರು.
No comments:
Post a Comment