ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಗುರುವಾರ ಸಂಸದ ಬಿ.ವೈ ರಾಘವೇಂದ್ರ ಪರಿಶೀಲನೆ ನಡೆಸಿದರು.
ಭದ್ರಾವತಿ: ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಜನವರಿ ೨೦೨೫ ನೂತನ ವರ್ಷಕ್ಕೆ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಂಸದ ಬಿ .ವೈ ರಾಘವೇಂದ್ರ ಹೇಳಿದರು.
ಅವರು ಗುರುವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. ೨೦೨೨ ಜನವರಿಯಲ್ಲಿ ಸುಮಾರು ೨೩ಕೋ.ರು. ವೆಚ್ಚದಲ್ಲಿ ಆರಂಭಗೊಂಡ ಎಲ್.ಸಿ-೩೪ ರೈಲ್ವೆ ಮೇಲ್ಸೇತುವೆ ಸೇತುವೆ ಕಾಮಗಾರಿ ಇದೀಗ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸುಮಾರು ಎರಡು ವರ್ಷಗಳವರೆಗೆ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಸುಮಾರು ೧೫ ಕಿ.ಮೀ ಬಳಸಿಕೊಂಡು ನಗರ ಪ್ರವೇಶಿಸಬೇಕಾಗಿದೆ. ಒಟ್ಟಾರೆ ಕಾಮಗಾರಿಗೆ ಸಹಕರಿಸಿರುವ ಎಲ್ಲರಿಗೂ ಹಾಗೂ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಧಿಕಾರಿಗಳು ಈಗಾಗಲೇ ಜನವರಿಯಲ್ಲಿ ಮೇಲ್ಸೇತುವೆ ಲೋಕಾರ್ಪಣೆಗೊಳಿಸುವ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಸಾರ್ವಜನಿಕರು ಸೇತುವೆ ಉಪಯೋಗಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈಲ್ವೆ ಇಲಾಖೆ ಎಂಜಿನಿಯರ್ ರಾಜ್‌ಕುಮಾರ್(ಎಇಇ), ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಎಂಜಿನಿಯರ್‌ಗಳಾದ ಬಿ.ಬಿ ಶಿವಪ್ರಸಾದ್, ಕೆ. ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ರಾಜು ತಲ್ಲೂರು, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment