Saturday, May 10, 2025

ಜಾತಿ ಗಣತಿ : ಸೂಕ್ತ ಮಾಹಿತಿ ನೀಡಿ ಮೂಲ ಜಾತಿ ದಾಖಲಿಸಿ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ತಾಲೂಕು ಛಲವಾದಿಗಳ(ಪ.ಜಾ) ಸಮಾಜದ ಸಂಘದ ಕಛೇರಿಯಲ್ಲಿ ಜಾತಿ ಗಣತಿ ಸಂಬಂಧ ಸಭೆ ನಡೆಸಲಾಯಿತು.
    ಭದ್ರಾವತಿ : ಜಾತಿ ಗಣತಿಗಾಗಿ ಮನೆಗೆ ಬರುವವರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಮೂಲ ಜಾತಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂದು ದಾಖಲಿಸುವಂತೆ ತಾಲೂಕು ಛಲವಾದಿಗಳ(ಪ.ಜಾ) ಸಮಾಜ ಮನವಿ ಮಾಡಿದೆ. 
    ನಗರದ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಈ ಹಿಂದೆ ಗಣತಿ ಕಾರ್ಯದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ(ಆದಿ ಕರ್ನಾಟಕ)ಗೆ ಸೇರಿರುವ ಛಲವಾದಿ ಸಮಾಜದವರು ಮೋಸ ಹೋಗಿದ್ದಾರೆ. ಆದರೆ ಈ ಬಾರಿ ಆ ರೀತಿಯಾಗದಂತೆ ಸಮಾಜದವರು ಎಚ್ಚರ ವಹಿಸಬೇಕಾಗಿದೆ. ಮೂಲ ಜಾತಿ ವಿಷಯದಲ್ಲಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂಬುದನ್ನು ದಾಖಲಿಸಬಹುದಾಗಿದೆ. ರಾಜ್ಯದ ವಿವಿಧೆಡೆ ಸಮಾಜ ಬಂಧುಗಳು ಆಯಾ ಭಾಗಕ್ಕೆ ತಕ್ಕಂತೆ ಮೂಲ ಜಾತಿ ದಾಖಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಸಮಾಜ ಬಂಧುಗಳು ಸಹ ತಮ್ಮ ಇಚ್ಛೆಯಂತೆ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಈ ಮೂರು ಹೆಸರಿನಲ್ಲಿ ಯಾವುದಾದರೂ ಒಂದು ದಾಖಲಿಸುವಂತೆ ಮನವಿ ಮಾಡಿದರು. 
    ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ, ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಸಾವಕ್ಕನವರ್, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಶ್ರೀನಿವಾಸ್(ನಂಜಾಪುರ), ನಿತ್ಯಾನಂದ, ಎಚ್.ಎಂ ಮಹಾದೇವಯ್ಯ, ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment