ಭದ್ರಾವತಿಯಲ್ಲಿ ಶನಿವಾರ ಮತ್ತು ಭಾನುವಾರ ಜಾರಿಗೊಳಿಸಲಾಗಿದ್ದ ೨ ದಿನಗಳ ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಕಂಡು ಬಂದ ದೃಶ್ಯ.
ಭದ್ರಾವತಿ, ಮೇ. ೨೩: ತಾಲೂಕಿನಲ್ಲಿ ಶನಿವಾರ ಮತ್ತು ಭಾನುವಾರ ಜಾರಿಗೊಳಿಸಲಾಗಿದ್ದ ೨ ದಿನಗಳ ಸಂಪೂರ್ಣ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದ್ದು, ಆದರೂ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈಗಾಗಲೇ ಬಹುತೇಕ ಕಡೆ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನಲೆಯಲ್ಲಿ ಆತಂಕ ಎದುರಾಗಿದೆ.
ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ೨ ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ಹೆಚ್ಚಿನ ಶ್ರಮವಹಿಸಿರುವುದು ಕಂಡು ಬಂದಿದ್ದು, ಜನ ಸಂಚಾರ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಳಭಾಗದ ರಸ್ತೆಗಳನ್ನು ಸಹ ಬ್ಯಾರಿಗೇಡ್‌ಗಳಿಂದ ಬಂದ್ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ತೀವ್ರಗೊಳಿಸಿ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಂಡರು.
ಹಾಲು ಹಾಗು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿ, ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಜನರು ಸಹ ಲಾಕ್‌ಡೌನ್‌ಗೆ ಪೂರಕವಾಗಿ ಸ್ಪಂದಿಸಿದರು. ಸಂಪೂರ್ಣ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಶನಿವಾರ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸೋಮವಾರ ಬೆಳಿಗ್ಗೆ ಸಂಪೂರ್ಣ ಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಆದರೆ ಎಂದಿನಂತೆ ಲಾಕ್‌ಡೌನ್ ಮುಂದುವರೆಯಲಿದೆ. ಸರ್ಕಾರ ಪುನಃ ಲಾಕ್‌ಡೌನ್ ಮುಂದುವರೆಸಿರುವ ಕಾರಣ ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.
No comments:
Post a Comment