ಭದ್ರಾವತಿ ತಾಲೂಕು ಛಾಯಾಗ್ರಾಹಕರ ತಂಡ.
* ಅನಂತಕುಮಾರ್
ಭದ್ರಾವತಿ, ಮೇ. ೨೪: ಸಮಾಜದಲ್ಲಿ ಛಾಯಾಗ್ರಾಹಕ ವೃತ್ತಿಗೂ ಒಂದು ವಿಶಿಷ್ಟ ಪರಂಪರೆ ಇದೆ. ಛಾಯಾಗ್ರಾಹಕರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ರಾಜ್ಯಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಇವರ ಬದುಕು ತೀರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ. ಈ ನಡುವೆ ಸರ್ಕಾರ ಸಹ ನಿರ್ಲಕ್ಷ್ಯತನ ವಹಿಸಿರುವುದು ಛಾಯಾಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯಾದ್ಯಂತ ಸುಮಾರು ೨ ಲಕ್ಷಕ್ಕೂ ಅಧಿಕ ಮಂದಿ ಛಾಯಾಗ್ರಾಹಕ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿದ್ದು, ತಾಲೂಕಿನಾದ್ಯಂತ ಛಾಯಾಗ್ರಾಹಕ ವೃತ್ತಿಯಲ್ಲಿ ಪೋಟೋಗ್ರಾಫರ್ ಹಾಗು ವಿಡಿಯೋಗ್ರಾಫರ್ ಮತ್ತು ಸ್ಟುಡಿಯೋಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಒಳಗೊಂಡಂತೆ ಸುಮಾರು ೨೭೦ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಇತರೆ ವೃತ್ತಿಗಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಛಾಯಾಗ್ರಾಹಕ ವೃತ್ತಿಯೇ ವಿಭಿನ್ನವಾಗಿದ್ದು, ಈ ವೃತ್ತಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸವೂ ಇಲ್ಲ, ಆದಾಯವೂ ಇಲ್ಲ. ವರ್ಷದಲ್ಲಿ ೫-೬ ತಿಂಗಳು ಮಾತ್ರ ಆದಾಯ ಎದುರು ನೋಡುವಂತಾಗಿದೆ. ಮದುವೆ, ಆರಕ್ಷತೆ, ನಾಮಕರಣ ಸೇರಿದಂತೆ ಶುಭಾ ಸಮಾರಂಭಗಳು, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರರ ಸಭೆ, ಸಮಾರಂಭಗಳನ್ನು ನಂಬಿಕೊಂಡು ಬದುಕುತ್ತಿರುವ ಛಾಯಾಗ್ರಾಹಕರು ಇದೀಗ ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹಲವು ಸವಾಲು:
ತಂತ್ರಜ್ಞಾನ ಬೆಳವಣಿಗೆಯಾದಂತೆ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿ ನಡುವೆ ಹಲವು ಸವಾಲುಗಳು ಎದುರಾಗುತ್ತಿದ್ದು, ಛಾಯಾಗ್ರಾಹಕರ ವೃತ್ತಿಯಲ್ಲೂ ಸಹ ಹಲವು ಸವಾಲುಗಳು ಎದುರಾಗಿವೆ. ಬಹುಮುಖ್ಯವಾಗಿ ಸ್ಮಾರ್ಟ್ ಮೊಬೈಲ್ ಪೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಛಾಯಾಗ್ರಾಹಕರ ಅಗತ್ಯ ಬಹುತೇಕ ಕಡಿಮೆಯಾಗಿದೆ. ಸರ್ಕಾರಿ ಹಾಗು ಖಾಸಗಿ ಕಛೇರಿಗಳಲ್ಲಿ ಡಿಜಿಟಲೀಕರಣದ ಪರಿಣಾಮದಿಂದ ಛಾಯಾಗ್ರಾಹಕರನ್ನು ಬಹುತೇಕ ದೂರವೇ ಇಡಲಾಗಿದೆ. ಇವೆಲ್ಲ ಸವಾಲು ಹಾಗು ಪೈಪೋಟಿಗಳ ನಡುವೆ ಛಾಯಾಗ್ರಾಹಕರು ತಮ್ಮ ಅಸ್ತಿತ್ವ ಉಳಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.
ಎಚ್. ಶ್ರೀನಿವಾಸ್
ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಸೌಲಭ್ಯಗಳು ನಮಗೆ ಲಭಿಸಿಲ್ಲ. ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಕಳೆದ ಬಾರಿ ಹಾಗು ಈ ಬಾರಿ ಘೋಷಿಸಿರುವ ಪರಿಹಾರ ಸಹ ಛಾಯಾಗ್ರಾಹಕರಿಗೆ ಲಭಿಸಿಲ್ಲ. ಪ್ರಸ್ತುತ ಛಾಯಾಗ್ರಾಹಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಇವರ ನೆರವಿಗೆ ಮುಂದಾಗಬೇಕು.
-ಎಚ್. ಶ್ರೀನಿವಾಸ್, ಅಧ್ಯಕ್ಷರು, ತಾಲೂಕು ಛಾಯಾಗ್ರಾಹಕರ ಸಂಘ, ಭದ್ರಾವತಿ.
ಸ್ಮೈಲ್ ಪ್ಲೀಸ್ ಎಂದವರ ನಗು ಕಿತ್ತುಕೊಂಡ ಕೊರೋನಾ:
ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಛಾಯಾಗ್ರಾಹಕರ ಬದುಕು ಅತಂತ್ರವಾಗಿದ್ದು, ಅದರಲ್ಲೂ ಲಾಕ್‌ಡೌನ್ ಸಂದರ್ಭದಲ್ಲಿ ಅವರ ಸ್ಥಿತಿ ಹೇಳತಿಹದು. ತಾಲೂಕಿನಲ್ಲಿರುವ ಸುಮಾರು ೨೭೦ ಛಾಯಾಗ್ರಾಹಕರ ಪೈಕಿ ಸುಮಾರು ೬೦ ಮಂದಿ ಲಕ್ಷಾಂತರ ರು. ಸಾಲಸೋಲ ಮಾಡಿ ಸ್ವಂತ ಸ್ಟುಡಿಯೋಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಾಲದ ಬಾಕಿ, ಸ್ಟುಡಿಯೋ ಬಾಡಿಗೆ ಕಟ್ಟಲು ಸಾಧ್ಯವಾಗದೆ ಪರಿತಪ್ಪಿಸುತ್ತಿದ್ದಾರೆ. ಉಳಿದಂತೆ ಛಾಯಾಗ್ರಾಹಕ ವೃತ್ತಿಯನ್ನೇ ನಂಬಿ ಕುಟುಂಬ ನಿರ್ವಹಣೆಯಲ್ಲಿ ತೊಡಗಿರುವವರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೊರೋನಾ ಮಹಾಮಾರಿ ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಿತ್ತುಕೊಂಡಿದೆ.
ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ:
ಛಾಯಾಗ್ರಾಹಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ೨೦೧೦ರಿಂದಲೂ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯಗಳು ಲಭಿಸಿಲ್ಲ. ೨೦೧೩ರಲ್ಲಿ ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ವಲಯದ ೪೨ನೇ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದರೂ ಸಹ ಯಾವುದೇ ಸೌಲಭ್ಯಗಳು ಛಾಯಾಗ್ರಾಹಕರಿಗೆ ಲಭಿಸುತ್ತಿಲ್ಲ. ಅಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಪರಿಹಾರ ಧನ ಸಹ ಇವರಿಗೆ ಲಭಿಸಿಲ್ಲ. ಉಳಿದಂತೆ ಸ್ಥಳೀಯ ಸಂಸ್ಥೆಗಳಿಂದಲೂ ಯಾವುದೇ ಸೌಲಭ್ಯಗಳಿಲ್ಲ. ಇದರಿಂದಾಗಿ ಕೇವಲ ಹೆಸರಿಗೆ ಮಾತ್ರ ಅಸಂಘಟಿತ ಕಾರ್ಮಿಕರಾಗಿ ಉಳಿದುಕೊಂಡಿದ್ದಾರೆ.
No comments:
Post a Comment