ಬುಧವಾರ, ಜುಲೈ 2, 2025

ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ : ಜು.೧೦ರಿಂದ ಭದ್ರಾ ನಾಲೆಗಳಲ್ಲಿ ನೀರು ಹರಿಸಿ

ಪ್ರತಿಭಟನೆ ನಡೆಸಿ ರೈತರಿಂದ ತಹಸೀಲ್ದಾರ್‌ಗೆ ಮನವಿ 

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ಬಲದಂಡೆ ನಾಲೆ ಸೀಳಿ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿ ಕೈಬಿಡುವಂತೆ ರೈತ ಮುಖಂಡರು ತಹಸೀಲ್ದಾರ್ ಮನವಿ ಸಲ್ಲಿಸಿ ಆಗ್ರಹಿಸಿದರು. 
    ಭದ್ರಾವತಿ: ಕುಡಿಯುವ ನೀರಿನ ಯೋಜನೆ ನೆಪದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿ ಕೈಬಿಡುವಂತೆ ರೈತ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದರು. 
    ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಕುಡಿಯುವ ನೀರಿನ ಯೋಜನೆ ನೆಪದಲ್ಲಿ ರಾಜಕಾರಣ ಮಾಡುವ ಬದಲು ಯೋಜನೆಯ ತಾಂತ್ರಿಕ ಸಮಿತಿ ನೀಡಿರುವ ವರದಿಯಲ್ಲಿನ ಕಾಮಗಾರಿಯ ೨ನೇ ಆಯ್ಕೆಯನ್ನು ಪರಿಗಣಿಸಿ ಮುಂದುವರೆಯುವುದರಲ್ಲಿ ಯಾವುದೇ ವಿರೋಧವಿಲ್ಲ. ಪ್ರಸ್ತುತ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು ಎಂದು ಆಗ್ರಹಿಸಿದರು. 
    ಪ್ರಸ್ತುತ ಕೈಗೊಳ್ಳುತ್ತಿರುವ ಕಾಮಗಾರಿಯಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಜಲಾಶಯದ ನೀರು ನಂಬಿಕೊಂಡು ಬೆಳೆ ಬೆಳೆಯುತ್ತಿರುವ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಕುಡಿಯುವ ನೀರು ಪೂರೈಕೆಗೆ ಯಾವುದೇ ವಿರೋಧವಿಲ್ಲ. ಆದರೆ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಒಂದೆಡೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಮತ್ತೊಂದೆಡೆ ಬೃಹತ್ ಜಲಾಶಯದ ಸುರಕ್ಷತೆ ನಿರ್ಲಕ್ಷಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ಪ್ರಸ್ತುತ ಕೈಗೊಳ್ಳುತ್ತಿರುವ ಕಾಮಗಾರಿಗೆ ಸಂಬಂಧಿಸಿದಂತೆ ಯೋಜನೆಯ ತಾಂತ್ರಿಕ ಸಮಿತಿ ಬಲದಂಡೆ ನಾಲೆ ಸೀಳುವ ಬದಲು ನದಿ ನೀರನ್ನು ನೇರವಾಗಿ ಜಾಕ್‌ವೆಲ್‌ಗಳ ಮೂಲಕ ಹರಿಸುವ ಮತ್ತೊಂದು ಆಯ್ಕೆಯನ್ನು ನೀಡಿದೆ. ಇದಕ್ಕೆ ರೈತರ ವಿರೋಧವಿಲ್ಲ. ಜೊತೆಗೆ ಇದರಿಂದ ಜಲಾಶಯಕ್ಕೆ ಯಾವುದೇ ರೀತಿ ಅಪಾಯವಿರುವುದಿಲ್ಲ. ಈ ಆಯ್ಕೆಯ ಪ್ರಕಾರ ಕಾಮಗಾರಿ ನಡೆಸಬಹುದಾಗಿದ್ದು, ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟಾಗಿ ಸೇರಿಕೊಂಡು ಹಣ ಲೂಟಿಮಾಡುವ ಉದ್ದೇಶದಿಂದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. 
    ತಕ್ಷಣ ಕೈಗೊಂಡಿರುವ ಕಾಮಗಾರಿ ಸ್ಥಗಿತಗೊಳಿಸಿ ಜಲಾಶಯಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವ ಮೂಲಕ ಪ್ರತಿ ವರ್ಷದಂತೆ ಈ ಬಾರಿ ಸಹ ರೈತರ ಬೆಳೆಗಳಿಗೆ ಜು.೧೦ರಿಂದ ನಾಲೆಯಲ್ಲಿ ನೀರು ಹರಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಸೀಲ್ದಾರ್‌ರವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. 
    ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವಲಯ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಣ್ಣಯ್ಯ, ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ, ಜಿಲ್ಲಾ ಗೌರವಾಧ್ಯಕ್ಷ ಈರಣ್ಣಪ್ಯಾಟಿ, ಜಿಲ್ಲಾ ಕಾರ್ಯದರ್ಶಿ ಪುಟ್ಟಣ್ಣ ಗೌಡ್ರು ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ