ಭದ್ರಾವತಿಯಲ್ಲಿ ಭಾನುವಾರ ಆರೋಗ್ಯ ಇಲಾಖೆ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೊಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
ಭದ್ರಾವತಿ, ಜ. ೩೧: ಅಂಗವೈಕಲ್ಯದಿಂದ ಮುಕ್ತಿಹೊಂದುವ ಜೊತೆಗೆ ಸದೃಢವಾಗಿ ಆರೋಗ್ಯವಂತರಾಗಿ ಬೆಳೆಯಲು ಪಲ್ಸ್ ಪೋಲಿಯೋ ಹೆಚ್ಚು ಸಹಕಾರಿಯಾಗಿದ್ದು, ಪ್ರತಿಯೊಬ್ಬರು ನಿರ್ಲಕ್ಷ್ಯವಹಿಸದೆ ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ಅವರು ಭಾನುವಾರ ಆರೋಗ್ಯ ಇಲಾಖೆ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೊಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೋಲಿಯೋ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದಿದೆ. ಈ ಹಿಂದೆ ದೇಶದಲ್ಲಿ ಸಾಕಷ್ಟು ಜನರು ಅಂಗವೈಕಲ್ಯಕ್ಕೆ ಒಳಗಾಗಿ ಸಂಕಷ್ಟದ ಬದುಕು ನಡೆಸಿದ್ದರು. ಭವಿಷ್ಯದಲ್ಲಿ ಪುನಃ ಪೋಲಿಯೋ ಕಾಣಿಸಿಕೊಳ್ಳಬಾರದೆಂಬ ಧ್ಯೇಯದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳು ನಡೆದು ಪಲ್ಸ್ ಪೋಲಿಯೋ ಕಂಡು ಹಿಡಿಯಲಾಯಿತು. ಆ ನಂತರ ದೇಶಾದ್ಯಂತ ನಿರಂತರವಾಗಿ ೫ ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಹಾಕಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಅಲೆಮಾರಿ ಹಾಗು ವಲಸೆ ಕಾರ್ಮಿಕ ಕುಟುಂಬಗಳನ್ನು ಗುರುತಿಸಿ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹಾಕಲಾಗುತ್ತಿದೆ. ಭಾರತ ದೇಶ ೨೦೧೧ರಲ್ಲಿಯೇ ಪೋಲಿಯೋ ಮುಕ್ತವಾಗಿದ್ದು, ಪಾಕಿಸ್ತಾನ, ಅಪ್ಘಾನಿಸ್ತಾನ ಸೇರಿದಂತೆ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಪೋಲಿಯೋ ಇನ್ನೂ ಜೀವಂತವಾಗಿದ್ದು, ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ದೇಶದಲ್ಲಿ ಪಲ್ಸ್ ಪೋಲಿಯೋ ಹಾಕಲಾಗುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಓ. ಮಲ್ಲಪ್ಪ, ರೇವತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್‌ಬಾಬು, ರಮಾಕಾಂತ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್, ಕಾರ್ಯದರ್ಶಿ ಎಂ.ಎನ್ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment