ಭದ್ರಾವತಿ ಜನ್ನಾಪುರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಒಂದು ನೆನಪು ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು.
ಭದ್ರಾವತಿ, ಜ. ೩೧: ಯಾರಿಗೂ ಅಧಿಕಾರ ಮುಖ್ಯವಲ್ಲ. ಬೆಳೆದು ಬಂದ ದಾರಿ, ಬೆಳೆಯಲು ಕಾರಣಕರ್ತದವರು ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್ ಹೇಳಿದರು.
ಅವರು ಭಾನುವಾರ ಜನ್ನಾಪುರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಒಂದು ನೆನಪು ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರ ರಾಜಕೀಯ ಜೀವನ ವೈಶಿಷ್ಟ ಪೂರ್ಣವಾಗಿದ್ದು, ಅವರು ಎಂದಿಗೂ ಕುಟುಂಬ ರಾಜಕಾರಣ ಮಾಡಲಿಲ್ಲ. ಅವರು ನಂಬಿ ಬಂದವರನ್ನು ಅಧಿಕಾರ ಇರಲಿ, ಇಲ್ಲದಿರಲಿ ಕೊನೆಯವರೆಗೂ ಕೈಬಿಡಲಿಲ್ಲ. ತಮ್ಮದೇ ಆದ ವರ್ಚಸ್ಸು, ಅಭಿಮಾನ ಬಳಗ ಹೊಂದಿದ್ದರು. ಅವರು ನಿಧನ ಹೊಂದಿದ ನಂತರ ಕೆಲವು ಹಿಂಬಾಲಕರು ಸುಳ್ಳು ಹೇಳಿಕೆಗಳನ್ನು ನೀಡುವ ಜೊತೆಗೆ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆಂದು ಹೆಸರು ಹೇಳದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಶಿಮೂಲ್ ಅಧ್ಯಕ್ಷನಾಗಲು ಎಂ.ಜೆ ಅಪ್ಪಾಜಿಯವರು ಕಾರಣಕರ್ತರಾಗಿದ್ದು, ಅವರ ಋಣ ತೀರಿಸಲು ಸಾಧ್ಯವಿಲ್ಲ. ಅವರು ಬದುಕಿರುವಾಗ ಅವರಿಗೆ ನೀಡುತ್ತಿದ್ದ ಗೌರವವನ್ನು ಅವರ ನಿಧನ ಹೊಂದಿದ ನಂತರವೂ ಸಹ ನೀಡುತ್ತಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರಲ್ಲೂ ಇದೆ ಭಾವನೆ ಇದೆ ಎಂದು ಭಾವಿಸಿರುತ್ತೇನೆ. ಆದರೆ ಅಪ್ಪಾಜಿಯವರ ನೆರವಿನಿಂದ ಇಂದು ರಾಜಕಾರಣದಲ್ಲಿ ಮುಂದೆ ಬಂದವರು ಅವರನ್ನು ಇಂದು ಅಗೌರವದಿಂದ ಕಾಣುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಮಾತನಾಡಿ, ಅಪ್ಪಾಜಿಯವರ ಹೆಸರು ಹೇಳಿಕೊಳ್ಳುವುದೇ ಒಂದೇ ದೊಡ್ಡ ಗೌರವವಾಗಿದೆ. ಈ ಗೌರವದ ಮುಂದೆ ಯಾವ ಅಧಿಕಾರವೂ ದೊಡ್ಡದಲ್ಲ. ಅಪ್ಪಾಜಿಯವರು ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಕ್ಷೇತ್ರದ ಜನರು ಕೊನೆಯವರೆಗೂ ಮರೆಯುವುದಿಲ್ಲ. ಯಾರೋ ಕೆಲವು ಬೆಂಬಲಿಗರು ಬಿಟ್ಟು ಹೋಗಬಹುದು. ಅದಕ್ಕೆ ಯಾರು ಸಹ ಚಿಂತಿಸಬೇಕಾದ ಅಗತ್ಯವಿಲ್ಲ. ಬಿಟ್ಟು ಹೋದವರ ಪೈಕಿ ಎರಡರಷ್ಟು ಮಂದಿ ಪುನಃ ಹಿಂದಿರುಗಿ ಬರಲಿದ್ದಾರೆ. ಅಪ್ಪಾಜಿಯವರ ಕುಟುಂಬ ಪುನಃ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. ಶಾರದ ಅಪ್ಪಾಜಿಯವರು ಎಲ್ಲಾ ಅಭಿಮಾನಿಗಳಿಗೂ, ಕಾರ್ಯಕರ್ತರಿಗೂ ಮಾರ್ಗದರ್ಶಕರಾಗಿ ಮುನ್ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾರದ ಅಪ್ಪಾಜಿ, ಅಭಿಮಾನಿಗಳು, ಕಾರ್ಯಕರ್ತರು ಅಪ್ಪಾಜಿಯವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ. ಅಪ್ಪಾಜಿಯವರಿಗೆ ನೀಡುತ್ತಿದ್ದ ಸಹಕಾರ, ಪ್ರೋತ್ಸಾಹ ನಾನು ಸಹ ನಿರೀಕ್ಷಿಸುತ್ತೇನೆ. ಕೊನೆಯವರೆಗೂ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆಂದು ಭರವಸೆ ನೀಡಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಹಿರಿಯ ಮುಖಂಡ ಕರಿಯಪ್ಪ, ನ್ಯಾಯವಾದಿ ಎ.ಟಿ ರವಿ ಸೇರಿದಂತೆ ಇನ್ನಿತರರು ಮಾತನಾಡಿದರು.
ನಗರಸಭಾ ಸದಸ್ಯರಾದ ಎಚ್.ಬಿ ರವಿಕುಮಾರ್, ಆನಂದ್, ಮುಖಂಡರಾದ ಬಸವರಾಜ ಆನೇಕೊಪ್ಪ, ಧರ್ಮರಾಜ್, ಕೆ. ಮಂಜುನಾಥ್, ಉಮೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಡಿಎಸ್ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಕೃಷ್ಣರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ ವಂದಿಸಿದರು.
No comments:
Post a Comment