Sunday, February 28, 2021

ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ

'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ


ಭದ್ರಾವತಿಯಲ್ಲಿ ಭಾನುವಾರ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡು ಮಾತನಾಡಿದರು.
   ಭದ್ರಾವತಿ, ಫೆ. ೨೮: ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ ಎಂಬುದನ್ನು ಎಲ್ಲರಿಗೂ ಅರಿತುಕೊಳ್ಳಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
    ಅವರು ಭಾನುವಾರ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನದ ಗುರಿ ಯಾವುದು ಎಂಬುದನ್ನು ಗುರುತಿಸಿಕೊಳ್ಳಬೇಕು. ಬದುಕಿನ ವಿವಿಧ ಹಂತಗಳನ್ನು ಯಶಸ್ವಿಯಾಗಿ ತಲುಪುವುದೇ ಜೀವನದ ಮುಖ್ಯ ಗುರಿಯಲ್ಲ. ನಮಗೆ ಆನಂದ, ಆತ್ಮತೃಪ್ತಿ ಸಿಗುವ ಮಾರ್ಗದಲ್ಲಿ ಸಾಗುವುದೇ ಜೀವನದ ಗುರಿಯಾಗಬೇಕು. ಇದನ್ನು ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ.
   ದೇವರು ನಮ್ಮಿಂದ ಯಾವುದನ್ನೂ ಸಹ ಅಪೇಕ್ಷಿಸದೆ ನಮಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾವು ಆ ದೇವರು ಕೊಟ್ಟಿರುವುದರಲ್ಲಿ ಸ್ವಲ್ಪ ಭಾಗವನ್ನು ಮತ್ತೊಬ್ಬರಿಗೆ ನೀಡುವಲ್ಲಿ ಹಿಂದೆ ಮುಂದೆ ನೋಡುತ್ತಿದ್ದೇವೆ. ನಮ್ಮ ಪರಿಸರದಲ್ಲಿ ಅಕ್ಕಪಕ್ಕದಲ್ಲಿ ಬದುಕುತ್ತಿರುವವರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಹಣವಂತರು ಬಡವರಿಗೆ ನೆರವಾಗಬೇಕು. ಅಕ್ಷರಸ್ಥರು ಅನಕ್ಷರಸ್ಥರಿಗೆ ನೆರವಾಗಬೇಕು ಹೀಗೆ ಎಲ್ಲಾ ರೀತಿಯಿಂದಲೂ ನಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಆನಂದ, ಆತ್ಮತೃಪ್ತಿ ಕಂಡುಕೊಳ್ಳಬೇಕು. ಭಾರತ ದೇಶ ಹಲವು ವೈವಿಧ್ಯತೆಗಳಿಂದಾಗಿ ಜಗತ್ತಿನಲ್ಲಿ ವಿಶಿಷ್ಟ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಇಂತಹ ನೆಲದಲ್ಲಿ ನಮ್ಮ ಬದುಕು ಸಾರ್ಥಕಗೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ತನ್ನ ಸೇವಾ ಕಾರ್ಯವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
    ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಸಮ್ಮೇಳನ ಉದ್ಘಾಟಿಸಿದರು. ವಾಗ್ಮಿ ಪ್ರೊ. ಡಾ. ಕೆ.ಪಿ ಪುತ್ತುರಾಯ ಪಿಡಿಜಿ ದಿವಾಕರ್, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಸ್ವಾಗತಿಸಿದರು. ಶುಗರ್ ಟೌನ್, ಸರ್ವೋದಯ ನಗರ, ಯಡೇಹಳ್ಳಿ, ಹೊಳೆಹೊನ್ನೂರು ಮತ್ತು ಸನ್ಯಾಸಿ ಕೋಡಮಗ್ಗೆ ಪ್ರಾಂತೀಯ ವಲಯ-೧ರ ಕ್ಲಬ್‌ಗಳ ಹಾಗು ಶಿವಮೊಗ್ಗ, ಶಿವಮೊಗ್ಗ ಕಾಸ್ಮೊಪೊಲಿಟ್ಯಾನ್, ಬಿ.ಆರ್ ಪ್ರಾಜೆಕ್ಟ್, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಸಹ್ಯಾದ್ರಿ, ಹೊಸನಗರ ಕೊಡಚಾದ್ರಿ ಮತ್ತು ಶಿವಮೊಗ್ಗ ಶಾಂಭವಿ ಪ್ರಾಂತೀಯ ವಲಯ-೨ರ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

No comments:

Post a Comment