Thursday, April 14, 2022

ಇತರರ ಜೀವದ ಜೊತೆಗೆ ತಮ್ಮ ಜೀವಕ್ಕೂ ಗಮನ ಹರಿಸಿ ಕರ್ತವ್ಯ ನಿರ್ವಹಿಸಿ : ಆರ್. ಪ್ರದೀಪ್

ಭದ್ರಾವತಿ ಬೈಪಾಸ್ ರಸ್ತೆ ಹೊಸ ಬುಳ್ಳಾಪುರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಗುರುವಾರ ಅಗ್ನಿಶಾಮಕ ಸೇವಾ ಸಪ್ತಾಹ ಮತ್ತು ಅಗ್ನಿಶಾಮಕ ದಳದ ಹುತ್ಮಾತರ ಹಾಗು ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಏ. ೧೪: ಅಗ್ನಿಶಾಮಕ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ತಮ್ಮ ಜೀವದ ಕಡೆಗೂ ಹೆಚ್ಚಿನ ಗಮನ ಹರಿಸುವ ಮೂಲಕ ಇತರರ ಜೀವ ರಕ್ಷಣೆಯಲ್ಲಿ ತೊಡಗಬೇಕೆಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಗುರುವಾರ ನಗರದ ಬೈಪಾಸ್ ರಸ್ತೆ ಹೊಸ ಬುಳ್ಳಾಪುರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಮತ್ತು ಅಗ್ನಿಶಾಮಕ ದಳದ ಹುತ್ಮಾತರ ಹಾಗು ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಬಹಳಷ್ಟು ಜನರಿಗೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಅರಿವಿಲ್ಲವಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಮಾತ್ರ ಇಲಾಖೆ ಸಿಬ್ಬಂದಿಗಳು ಜನರ ನೆನಪಿಗೆ ಬರುತ್ತಾರೆ. ಈ ಹಿನ್ನಲೆಯಲ್ಲಿ ಸಿಬ್ಬಂದಿಗಳು ಜನರಿಗೆ ಮೊದಲು ತಮ್ಮ ಕರ್ತವ್ಯಗಳ ಬಗ್ಗೆ ತಿಳಿಸುವ ಜೊತೆಗೆ ಅಗ್ನಿ ಅವಘಡಗಳ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಬಹಳಷ್ಟು ಕಟ್ಟಡಗಳಲ್ಲಿ ತುರ್ತು ಕ್ರಮಗಳಿಗಾಗಿ ಅಗ್ನಿಶಾಮಕ ಇಲಾಖೆಯ ಪರಿಕರಗಳನ್ನು ಅಳವಡಿಸಲಾಗಿದೆ. ಆದರೆ ಇವುಗಳನ್ನು ಬಳಸುವ ಬಗೆ ಯಾರಿಗೂ ಗೊತ್ತಿಲ್ಲ. ಕೇವಲ ಪ್ರದರ್ಶನಕ್ಕೆ ಸೀಮಿತವಾಗಿರುವಂತೆ ಕಂಡು ಬರುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
    ಇತ್ತೀಚೆಗೆ ನಗರದ ಸಾಮಿಲ್ ಒಂದರಲ್ಲಿ ಸಂಭವಿಸಿದ ಬಹುದೊಡ್ಡ ಅಗ್ನಿ ದುರಂತದ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳ   ಮಹತ್ವದ ಬಗ್ಗೆ ಅರಿತುಕೊಂಡಿದ್ದೇನೆ. ಅಲ್ಲದೆ ಠಾಣೆಯಲ್ಲಿನ ಸಮಸ್ಯೆಗಳು ಹಾಗು ಸಿಬ್ಬಂದಿಗಳು ಎದುರಿಸುತ್ತಿರುವ ಸವಾಲುಗಳನ್ನು ತಿಳಿದುಕೊಂಡಿದ್ದೇನೆ. ಸಿಬ್ಬಂದಿಗಳು ವೃತ್ತಿಯನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ತುರ್ತು ಸಂದರ್ಭಗಳಲ್ಲಿ ಇತರರ ಜೀವ ರಕ್ಷಣೆಗೆ ನೀಡುವ ಮಹತ್ವವನ್ನು ತಮ್ಮ ಜೀವದ ಮೇಲೂ ನೀಡಬೇಕು. ಬಹಳಷ್ಟು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
    ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕಿ ಅಂಬಿಕಾ, ಉಪತಹಸೀಲ್ದಾರ್ ಮಂಜಾನಾಯ್ಕ, ವಲಯ ಅರಣ್ಯಾಧಿಕಾರಿ ಕೆ.ಆರ್ ರಾಜೇಶ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ೯೭ ಆರ್‌ಎಎಫ್ ಬೆಟಾಲಿಯನ್ ಡೆಫ್ಟಿ ಕಮಾಡೆಂಟ್ ಬಿರೇಂದ್ರ ಪ್ರತಾಪ್ ಸಿಂಗ್, ಗೃಹರಕ್ಷಕ ದಳ ಠಾಣಾಧಿಕಾರಿ ಜಗದೀಶ್, ಉದ್ಯಮಿ ಗಿರಿರಾಜ್, ಸ್ಥಳೀಯ ಚಂದ್ರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಿನೂತನ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸುರೇಶ್ ಆಚಾರ್, ಕರಿಯಣ್ಣ, ಎಚ್.ಎಂ ಹರೀಶ್, ಕೆ.ಎಚ್ ರಾಜಾ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment