Friday, December 31, 2021

ನಗರಸಭೆ ಆವರಣದಲ್ಲಿಯೇ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪನೆ



ನಾಡಹಬ್ಬ ದಸರಾ ಆಚರಣೆಗಾಗಿ ಭದ್ರಾವತಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಭದ್ರಾವತಿ, ಡಿ. ೩೧: ನಾಡಹಬ್ಬ ದಸರಾ ಆಚರಣೆಗಾಗಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಈ ಹಿಂದೆ ನಾಡಹಬ್ಬ ದಸರಾ ಆಚರಣೆಗಾಗಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತಿತ್ತು. ಇದರಿಂದ ನಗರಸಭೆಗೆ ಹೆಚ್ಚಿನ ಹೊರೆ ಕಂಡು ಬರುತ್ತಿತ್ತು. ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ಸದಸ್ಯರ ಒತ್ತಾಯದ ಮೇರೆಗೆ ನಗರಸಭೆ ವತಿಯಿಂದ ಪ್ರತಿಮೆಯನ್ನು ಖರೀದಿಸಿದ್ದರು. ಆದರೆ ಪ್ರತಿಮೆ ಪ್ರತಿಷ್ಠಾಪಿಸಲು ಸೂಕ್ತ ಸ್ಥಳವಕಾಶವಿರಲಿಲ್ಲ. ಇದರಿಂದಾಗಿ ಕೆಲವು ದಿನಗಳವರೆಗೆ ಗ್ರಾಮ ದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿಮೆ ಇಡಲಾಗಿತ್ತು. ನಂತರ ದಿನಗಳಲ್ಲಿ ಪ್ರತಿಮೆಯನ್ನು ನಗರಸಭೆ ಆವರಣಕ್ಕೆ ಸ್ಥಳಾಂತರಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿಯೇ ಇಡಲಾಗಿತ್ತು. ಇದೀಗ ಪ್ರತಿಮೆಗೆ ಪ್ರತ್ಯೇಕವಾಗಿ ಕೊಠಡಿ ನಿರ್ಮಿಸಿ ಶಾಶ್ವತ ನೆಲೆ ಕಲ್ಪಿಸಿಕೊಡಲಾಗಿದೆ.
    ಶುಕ್ರವಾರ ಪ್ರತಿಷ್ಠಾಪನೆ ಅಂಗವಾಗಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ನಗರಸಭೆ ಅಧ್ಯಕ್ಷೆ ಗೀತಾರಾಜ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಗರಸಭಾ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು, ರಮಾಕಾಂತ್, ನರಸಿಂಹಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment