ತಿರುಗಿ ನೋಡದ ಅಧಿಕಾರಿಗಳು : ಸಂತ್ರಸ್ಥರ ಆರೋಪ
ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿರುವುದು.
ಭದ್ರಾವತಿ, ಆ. ೯: ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦-೧೨ ಹಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಸುರಗಿತೋಪಿನ ೨, ೩ ಮತ್ತು ೪ನೇ ರಸ್ತೆಯಲ್ಲಿರುವ ಹಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಸುಂದ್ರಮ್ಮ, ಸಂತೋಷ್, ವೆಂಕಟೇಶ್ ಮತ್ತು ರಮೇಶ್ ಎಂಬುವರ ಮನೆಗಳ ಗೋಡೆಗಳು ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದು, ಉಳಿದಂತೆ ಕೆಲವು ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಗಳಾಗಿವೆ.
ಇದುವರೆಗೂ ಯಾರು ಬಂದಿಲ್ಲ :
ಇಲ್ಲಿನ ಸುಮಾರು ೮೦ರಷ್ಟು ಮನೆಗಳಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಮೇಲಾಧಿಕಾರಿಗಳು ಹಕ್ಕು ಪತ್ರ ನೀಡುವುದನ್ನು ತಡೆ ಹಿಡಿದಿದ್ದಾರೆ ಎನ್ನುವ ಮಾಹಿತಿ ಇದ್ದು, ಇದೀಗ ಮನೆಗಳು ಕುಸಿದು ಬಿದ್ದಿದ್ದರೂ ಸಹ ಯಾವ ಅಧಿಕಾರಿಯೂ ಈ ಕಡೆ ತಿರುಗಿ ನೋಡಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಕಷ್ಟಕ್ಕೆ ಸ್ಪಂದಿಸುವಂತೆ ಸಂತ್ರಸ್ಥರು ಅಳಲು ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದ ಸೂಕ್ತ ಪರಿಹಾರ ನೀಡಿ:
ವಾರ್ಡ್ ಸದಸ್ಯೆ ಜಯಶೀಲ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಗೌರವ ಅಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ಪಕ್ಷದ ಮುಖಂಡರಾದ ಸುರೇಶ್(ಕ್ಲಬ್), ನಿರ್ಲಮಕುಮಾರಿ, ಉಮೇಶ್ ಸುರಗಿತೋಪು ಸೇರಿದಂತೆ ಇನ್ನಿತರರು, ಸಂತ್ರಸ್ಥರ ಮನೆಗಳಿಗೆ ತಕ್ಷಣ ಹಕ್ಕು ಪತ್ರ ನೀಡುವ ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
No comments:
Post a Comment