ಗೆಲುವು ಸಾಧಿಸುವ ಮೂಲಕ ಭರವಸೆ ಈಡೇರಿಸುವ ವಿಶ್ವಾಸ
ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಮುಖರು, ವೈದ್ಯರಾದ ಡಾ. ಧನಂಜಯ ಸರ್ಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಭದ್ರಾವತಿ, ಮೇ. ೪: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಕ್ಷ ಇದೀಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಮುಖರು, ವೈದ್ಯರಾದ ಡಾ. ಧನಂಜಯ ಸರ್ಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಆಡಳಿತ ಮತ್ತು ಅಭಿವೃದ್ಧಿ ಹಾಗು ವಿಶೇಷ ಆದ್ಯತೆಗಳಡಿ ಹಲವಾರು ಭರವಸೆಗಳನ್ನು ನೀಡಿದೆ.
ಪ್ರಮುಖವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಬೆಳವಣಿಗೆಗೆ ಆದ್ಯತೆ, ಕೆಆರ್‌ಎಸ್ ಮಾದರಿಯಲ್ಲಿ ಭದ್ರಾ ಜಲಾಶಯ ಸಮಗ್ರ ಅಭಿವೃದ್ಧಿ, ಕೈಗಾರಿಕಾ ವಸಾಹತುಗಳ ಮೇಲ್ದರ್ಜೆ ಮತ್ತು ಗಾರ್ಮೆಂಟರ‍್ಸ್‌ಗಳ ಸ್ಥಾಪನೆ, ಮಹಿಳೆಯರಿಗೆ ಕೈಗಾರಿಕಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ, ಸರ್ಕಾರಿ ಹೆರಿಗೆ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆದ್ಯತೆ, ಸುಸಜ್ಜಿತ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಮೆಡಿಕಲ್ ಹಾಗು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ೧೮ ವರ್ಷ ಪೂರ್ಣಗೊಂಡವರಿಗೆ ಕಾಲೇಜುಗಳಲ್ಲೇ ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ(ಡಿ.ಎಲ್) ನೀಡಲು ಆದ್ಯತೆ ಹಾಗು ಕ್ಷೇತ್ರದ ಅನ್ನದಾತ ಸರ್.ಎಂ ವಿಶ್ವೇಶ್ವರಾಯನವರ ಬೃಹತ್ ಪ್ರತಿಮೆ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ಈ ಬಾರಿ ಪ್ರಣಾಳಿಕೆಯಲ್ಲಿ ನೀಡಿದೆ.
ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿ, ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಣಾಳಿಕೆಯಲ್ಲಿರುವ ಬಹುತೇಕ ಭರವಸೆಗಳನ್ನು ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಆರ್.ಎಸ್ ಶೋಭಾ, ಎಂ.ಎಸ್ ಸುರೇಶಪ್ಪ, ಮಂಜುನಾಥ್ ಕದಿರೇಶ್, ಸಂಪತ್‌ರಾಜ್ ಬಾಂಟಿಯಾ, ಸುನಿಲ್ ಗಾಯಕ್‌ವಾಡ್, ಕವಿತಾ ರಾವ್, ಕೆ.ಎನ್ ಶ್ರೀಹರ್ಷ, ಬಿ.ಎಸ್ ಶ್ರೀನಾಥ್, ಕವಿತಾ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment