ಭದ್ರಾವತಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು.
ಭದ್ರಾವತಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ರೈತರು ಪಡೆದ ಸಾಲದ ಅಸಲು ಜೂ.೩೦ರೊಳಗೆ ಪಾವತಿಸಿದರೆ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಸುಸ್ತಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ಅಧ್ಯಕ್ಷ ಎಸ್. ಕೃಷ್ಣಪ್ಪ ತಿಳಿಸಿದರು.
ಅವರು ಸೋಮವಾರ ಬ್ಯಾಂಕಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಈ ಸಂಬಂಧ ಸಚಿವರು ಆದೇಶ ಹೊರಡಿಸಿದ್ದು, ಮಾರ್ಚ್ ೩೧ರ ವರೆಗೆ ನಿಗದಿಪಡಿಸಲಾಗಿದ್ದ ಯೋಜನೆಯನ್ನು ಕೊರೋನಾ ವೈರಸ್ ಹಿನ್ನಲೆಯಲ್ಲಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಬ್ಯಾಂಕಿನ ವತಿಯಿಂದ ಕೃಷಿ ಯೋಜನೆಯಲ್ಲಿ ದೀರ್ಘಾವಧಿ ಸಾಲ ನೀಡಲಾಗಿದ್ದು, ಮಾ.೩೧ರವರೆಗೆ ೧೧೯೧.೮೬ ಲಕ್ಷ ರು. ಸಾಲ ನೀಡಲಾಗಿದೆ. ಈ ಪೈಕಿ ೧೫೮.೧೧ ಲಕ್ಷ ರು. ವಸೂಲಾಗಿದ್ದು, ೧೦೩೩.೭೫ ಲಕ್ಷ ರು. ಬಾಕಿ ಉಳಿದಿದೆ. ಈ ಅವಧಿಯಲ್ಲಿ ಅಸಲು ಪೂರ್ಣ ಪಾವತಿಸಿರುವ ರೈತರು ಒಟ್ಟು ೯೯.೨೪ ಲಕ್ಷ ರು. ಬಡ್ಡಿ ರಿಯಾಯಿತಿ ಪಡೆದುಕೊಂಡಿದ್ದಾರೆ. ಜ.೩೧ರ ವರೆಗೆ ಸುಸ್ತಿಯಾಗಿರುವ ಎಲ್ಲಾ ರೈತರು ಅಸಲು ಪಾವತಿಸಿ ಬಡ್ಡಿ ರಿಯಾಯಿತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಎ.ಬಿ ಆಶಾ, ನಿರ್ದೇಶಕರಾದ ಎಚ್.ಎನ್ ಲೋಹಿತೇಶ್ವರಪ್ಪ, ವಿರುಪಾಕ್ಷಪ್ಪ, ಕೆ. ಗೋಪಾಲಪ್ಪ, ಕೆ. ಮಂಜಪ್ಪ, ಕೆ.ಎಂ ಕಾವೇರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment