ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ವಚನ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
ಭದ್ರಾವತಿ, ಏ. ೨೧: ಕುಟುಂಬದಲ್ಲಿ ಉತ್ತಮ ವಾತಾವರಣ ರೂಪುಗೊಳ್ಳಲು ಸಂಗೀತ ಸಹಕಾರಿಯಾಗಿದ್ದು, ಸಂಗೀತದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಗಾಯಕ ಶಿವರಾಜ್ ಹೇಳಿದರು.
ಅವರು ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡು ಮಾತನಾಡಿದರು.
ಇಂದು ನಾವು ಪಾಶ್ಚಿಮಾತ್ಯ ಸಂಗೀತದ ಕಡೆ ಹೆಚ್ಚಿನ ಒಲುವು ತೋರುತ್ತಿದ್ದೇವೆ. ಆದರೆ ಅದಕ್ಕಿಂತ ನಮ್ಮ ಸನಾತನ ಪರಂಪರೆಯ ಸಂಗೀತ, ವಚನಗಳು ಮನಸ್ಸಿಗೆ ನೀಡುವ ಸಂತೋಷ, ನೆಮ್ಮದಿ ಅವುಗಳು ನೀಡುವುದಿಲ್ಲ ಎಂದರು.
ಸಂಗೀತದಿಂದ ಹಲವು ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿದ ಹಲವಾರು ಘಟನೆಗಳು ವೈಜ್ಞಾನಿಕವಾಗಿ ಸಾಕ್ಷಿಯಾಗಿವೆ. ಇಂತಹ ವಿಶಿಷ್ಟವಾದ ಮಾಂತ್ರಿಕ ಶಕ್ತಿ ಹೊಂದಿರುವಂತಹ ಕ್ಷೇತ್ರದತ್ತ ಒಲವು ಬೆಳೆಸಿಕೊಳ್ಳಿ ಎಂದರು.
ಸಂಗೀತ ವಿದೂಷಿಗಳಾದ ಗಾಯಿತ್ರಿ ಹಾಗು ಗಿರಿಜಾ ಮಾತನಾಡಿ, ಮಹಿಳೆಯರು ರಾಗ, ತಾಳ, ಭಾವ, ಸಾಹಿತ್ಯದೊಂದಿಗೆ ಸಂಗೀತದ ಜೊತೆ ವಚನಗಳನ್ನು ಹೇಳುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಅಂತಹವರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಗಳು ದೊರೆಯುತ್ತವೆ ಎಂದರು.
ಸಂಗೀತ ಹಾಗು ವಚನಗಳನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ. ಆದರೆ ಕಲಿಯುವ ಆಸಕ್ತಿ ಬಹುಮುಖ್ಯ. ಇಂತಹ ಕಾರ್ಯಕ್ರಮ ಮತ್ತು ಶಿಬಿರಗಳಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ, ಆನಂದ ದೊರೆಯುತ್ತದೆ. ಅಲ್ಲದೆ ಪರಸ್ಪರರಲ್ಲಿ ಸ್ನೇಹ ಭಾವದ ಸಂಬಂಧ ಹೆಚ್ಚಾಗುತ್ತದೆ ಎಂದರು.
ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಸುಲೋಚನಾ ಪ್ರಾರ್ಥಿಸಿದರು. ನಾಗರತ್ನ ವಿ ಕೋಠಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಂತ ವಂದಿಸಿದರು. ಭಾಗ್ಯ, ಪುಟ್ಟಮ್ಮ, ಉಷಾ, ಶೃತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
No comments:
Post a Comment