ಲತಾ ಚಂದ್ರಶೇಖರ್
ಭದ್ರಾವತಿ: ನಗರಸಭೆ ಅಧ್ಯಕ್ಷರ ಚುನಾವಣೆ ಜ.೨೨ರಂದು ನಡೆಯಲಿದ್ದು, ಅಧ್ಯಕ್ಷರಾಗಿ ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನಗರಸಭೆ ಆಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಮೀಸಲಾತಿ ಮೊದಲ ೩೦ ತಿಂಗಳ ಅವಧಿ ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನಿರ್ದೇಶನದಂತೆ ಅರ್ಹ ಸದಸ್ಯರಿಗೆ ಬಿಡುಕೊಡಲಾಗುತ್ತಿದೆ. ಸಾಮಾನ್ಯ ಮಹಿಳಾ ಮೀಸಲು ಹೊಂದಿರುವ ಅಧ್ಯಕ್ಷ ಸ್ಥಾನ ಅಧಿಕಾರ ಈಗಾಗಲೇ ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ ಮತ್ತು ಶೃತಿ ಸಿ. ವಸಂತಕುಮಾರ್ ಕೆ.ಸಿ ಒಟ್ಟು ೩ ಮಂದಿ ಸದಸ್ಯರು ಅನುಭವಿಸಿದ್ದಾರೆ. ಉಳಿದ ಅವಧಿಗೆ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಈ ಹಿಂದೆಯೇ ಅಧಿಕಾರ ಅನುಭವಿಸಬೇಕಾಗಿದ್ದ ಲತಾ ಚಂದ್ರಶೇಖರ್ ಅವರಿಗೆ ಮೀಸಲಾತಿ ಕೊನೆ ಅವಧಿ ಅಧಿಕಾರ ಬಿಟ್ಟುಕೊಡುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಜ.೨೨ರಂದು ಚುನಾವಣೆ ನಡೆಯಲಿದೆ.
ಪ್ರಸ್ತುತ ನಗರಸಭೆಯಲ್ಲಿ ೧೮ ಕಾಂಗ್ರೆಸ್, ೧೨ ಜೆಡಿಎಸ್, ೪ ಬಿಜೆಪಿ ಹಾಗು ೧ ಪಕ್ಷೇತರ ಸದಸ್ಯರಿದ್ದಾರೆ. ಲತಾ ಚಂದ್ರಶೇಖರ್‌ರವರು ಮೂಲತಃ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಮೊದಲ ಬಾರಿಗೆ ವಾರ್ಡ್ ನಂ.೩೪ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
ಜ.೨೨ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧ ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ ೧.೧೫ ರಿಂದ ೧.೩೦ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ. ೧.೩೦ರ ನಂತರ ಅಧ್ಯಕ್ಷ ಘೋಷಣೆ ನಡೆಯಲಿದೆ. ಈ ಸಂಬಂಧ ಜ.೧೦ರಂದು ಉಪವಿಭಾಗಾಧಿಕಾರಿ ಚುನಾವಣೆ ಸೂಚನೆ ಪತ್ರ ಹೊರಡಿಸಿದ್ದಾರೆ.
No comments:
Post a Comment