Wednesday, May 5, 2021

ಗೆಲುವಿನ ಅಂತರದಲ್ಲೂ ಮಹಿಳೆ ಮೊದಲು : ವಾರ್ಡ್ ನಂ.೨೧ರ ವಿಜಯ ಸಾಧನೆ

ಭದ್ರಾವತಿ ವಾರ್ಡ್ ನಂ.೨೧ರ ಜೆಡಿಎಸ್ ಪಕ್ಷದ ಹಿರಿಯ ಮಹಿಳೆ ವಿಜಯ ೩೪ ವಾರ್ಡ್‌ಗಳ ಪೈಕಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು,  ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಬೆಂಬಲಿಗರು ವಿಜಯರನ್ನು ಅಭಿನಂದಿಸಿದರು.
   ಭದ್ರಾವತಿ: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಹಲವು ದಾಖಲೆಗಳು ರೂಪುಗೊಂಡಿದ್ದು, ಗೆಲುವಿನ ಅಂತರದಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ವಾರ್ಡ್ ನಂ.೨೧ರ ಜೆಡಿಎಸ್ ಪಕ್ಷದ ಹಿರಿಯ ಮಹಿಳೆ ವಿಜಯ ೩೪ ವಾರ್ಡ್‌ಗಳ ಪೈಕಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.
    ಕಾಗದನಗರ ೬ ಮತ್ತು ೮ನೇ ವಾರ್ಡ್ ವ್ಯಾಪ್ತಿಯ ವಾರ್ಡ್ ನಂ.೨೧ರಲ್ಲಿ ವಿಜಯ ಅವರು ಪುತ್ರ, ಸಮಾಜ ಸೇವಕ ಅಶೋಕ್‌ಕುಮಾರ್ ಹಾಗು ಕುಟುಂಬ ಸದಸ್ಯರ ಸಹಕಾರದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲರ ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ  ಅಭ್ಯರ್ಥಿಗಳು ವಿಜಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಅಲ್ಲದೆ ಬಿಜೆಪಿ ಅಭ್ಯರ್ಥಿ ಪರವಾಗಿ ಸ್ವತಃ  ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಪ್ರಮುಖರು ಪ್ರಚಾರ ನಡೆಸಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಪ್ರಚಾರ ನಡೆಸಿದ್ದರು. ಈ ನಡೆವೆಯೂ ವಿಜಯರವರು ಒಟ್ಟು ೧೨೮೦ ಮತಗಳನ್ನು ಪಡೆಯುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ೩೮೬ ಮತಗಳನ್ನು, ಬಿಜೆಪಿ ಅಭ್ಯರ್ಥಿ ೧೭೬ ಮತಗಳನ್ನು  ಪಡೆದುಕೊಂಡಿದ್ದಾರೆ. ವಿಜಯರವರು ಒಟ್ಟು ೮೯೪ ಅತಿ ಹೆಚ್ಚು ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
    ಪತ್ರಿಕೆಯೊಂದಿಗೆ ಮಾತನಾಡಿದ ವಿಜಯರವರು, ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಚನ್ನಾಗಿ ಅರಿತುಕೊಂಡಿದ್ದೇನೆ. ಎಲ್ಲಾ ಜನರೊಂದಿಗೆ ಆತ್ಮೀಯತೆಯಿಂದ ಗುರುತಿಸಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲುವಿಗೆ ಕಾರಣರಾಗಿರುವ ಮತದಾರರ ಆಶಯದಂತೆ ನಡೆದುಕೊಳ್ಳುತ್ತೇನೆ. ಲಭ್ಯವಾಗುವ ನಗರಸಭೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

No comments:

Post a Comment