Friday, April 2, 2021

ಕೊರೋನಾ ಪರಿಣಾಮದಿಂದ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ : ಮನೋಹರ್

ಭದ್ರಾವತಿ ಜನ್ನಾಪುರ ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಶುಕ್ರವಾರ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ, ಏ. ೨: ಕಳೆದ ಸುಮಾರು ೧ ವರ್ಷದಿಂದ ಕೊರೋನಾ ಸೋಂಕು ಮನುಷ್ಯನ ಆರೋಗ್ಯದ ಜೊತೆ ಆಟವಾಡುತ್ತಿದ್ದು, ಕೊರೋನಾ ಪರಿಣಾಮದಿಂದಾಗಿ ಮನುಷ್ಯ ತನ್ನ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು.
    ಅವರು ಶುಕ್ರವಾರ ಜನ್ನಾಪರು ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಜಂಜಾಟದ ಬದುಕಿನ ನಡುವೆ ಪ್ರಸ್ತುತ ಕೊರೋನಾ ಮನುಷ್ಯನ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ಸಗಳಿಗೆ ನಾವುಗಳು ಮುಂದಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಸಹ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಯೋಗ ಕಲಿಕೆ ಮೂಲಕ ಆರೋಗ್ಯವಂತರಾಗಲು ಕರೆ ನೀಡಿದರು.
   ಯೋಗ ಗುರು ಮಹೇಶ್ ಮಾತನಾಡಿ, ಪ್ರಶಸ್ತಿಗಾಗಿ ಯೋಗ ಸೀಮಿತವಾಗಿಲ್ಲ. ಯೋಗ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದ್ದು, ಎಲ್ಲಾ ರೀತಿಯ ಕಾಯಿಲೆಗಳಿಗೂ ಯೋಗ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಬಹುಮುಖ್ಯವಾಗಿ ಮಾನಸಿಕ, ದೈಹಿಕ ಒತ್ತಡಗಳಿಂದ ಹೊರಬರಲು ಯೋಗ ಹೆಚ್ಚಿನ ಸಹಕಾರಿಯಾಗಿದೆ. ಉತ್ತಮ ಮನಸ್ಸು, ದೇಹದಿಂದ ಉತ್ತಮ ಆರೋಗ್ಯ ಸಹ ಸಾಧ್ಯ. ಈ ಹಿನ್ನಲೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸಹ ಯೋಗದಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
  ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ-೨೦೨೧ ಸ್ಪರ್ಧೆಯಲ್ಲಿ ಯೋಗ ಕೇಂದ್ರದ ೧೨ ಮಂದಿ  ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿಗಳನ್ನು ಸ್ವೀಕರಿಸಿದ ಯೋಗಪಟುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
   ಸ್ಥಳೀಯ ಮುಖಂಡ ಕೆ. ಮಂಜುನಾಥ್, ಶೃತಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


No comments:

Post a Comment