Monday, March 15, 2021

ಭದ್ರಾವತಿ ವಿಧಾನಸಭಾ ಕ್ಷೇತ್ರದ ಗೂಂಡಾಗಿರಿ ಮೆಟ್ಟಿನಿಲ್ಲಲು ಬಿಜೆಪಿ ಸಿದ್ದವಿದೆ : ಬಿ.ವೈ ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿ ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಹಲ್ಲೆಗೊಳಗಾಗಿರುವ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ವಿಜಯೇಂದ್ರರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಮಾ. ೧೫: ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಮೆಟ್ಟಿನಿಲ್ಲಲು ಭಾರತೀಯ ಜನತಾ ಪಕ್ಷ ಎಲ್ಲಾ ರೀತಿಯಿಂದಲೂ ಸಿದ್ದವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
    ಅವರು ಸೋಮವಾರ ನಗರಕ್ಕೆ ಆಗಮಿಸಿ ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಹಲ್ಲೆಗೊಳಗಾಗಿರುವ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
    ಯಾವುದೇ ಕಬಡ್ಡಿ ಪಂದ್ಯಾವಳಿಯಲ್ಲಿ ಈ ರೀತಿಯ ಘಟನೆ ಎಲ್ಲೂ ಸಹ ನಡೆದಿಲ್ಲ. ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ನಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿರುವುದು ಶಿವಮೊಗ್ಗ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಎಂಬುದನ್ನು ಯಾರು ಮರೆಯುವಂತಿಲ್ಲ. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಹೊಸದೇನಲ್ಲ. ಇಂತಹ ಅನೇಕ ಸವಾಲುಗಳನ್ನು ಮೀರಿ ಇಂದು ಜಿಲ್ಲೆಯಲ್ಲಿ ಪಕ್ಷದ ಭಾವುಟ ಎತ್ತರಕ್ಕೇರಿದೆ. ಇದನ್ನು ಎಲ್ಲರೂ ಅರಿತು ಕೊಳ್ಳಬೇಕು. ಯಾರ ದಬ್ಬಾಳಿಕೆಗೂ ಯಾರು ಸಹ ಹೆದರುವ ಅಗತ್ಯವಿಲ್ಲ. ಪಕ್ಷ ಎಂದೆಂದಿಗೂ ಕಾರ್ಯಕರ್ತರೊಂದಿಗಿದೆ ಎಂದರು.
   ಬೆಳಿಗ್ಗೆ ನಗರಕ್ಕೆ ಆಗಮಿಸಿದ ವಿಜಯೇಂದ್ರ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಡಲ ಅಧ್ಯಕ್ಷ ಎಂ ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಜಿ. ಆನಂದಕುಮಾರ್, ಕೆ. ಮಂಜುನಾಥ್, ಚನ್ನೇಶ್, ರಾಮನಾಥ್ ಬರ್ಗೆ, ಧನುಷ್ ಬೋಸ್ಲೆ, ನಾರಾಯಣಪ್ಪ ದೊಡ್ಮನೆ, ಎಂ.ಎಸ್ ಸುರೇಶಪ್ಪ, ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸಿತರಿದ್ದರು.

No comments:

Post a Comment