Wednesday, September 20, 2023

ವಸತಿರಹಿತರಿಗೆ ನಿವೇಶನ, ಭೂ ಮಂಜೂರಾತಿ, ಸ್ಮಶಾನಕ್ಕಾಗಿ ಪ್ರತಿಭಟನೆ

 ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಡಿಎಸ್ಎಸ್ ಮನವಿ


ಭದ್ರಾವತಿ ತಾಲೂಕಿನಲ್ಲಿ ನಿವೇಶನ ಮತ್ತು ವಸತಿ ರಹಿತರ ಬಗ್ಗೆ, ಭೂ ಮಂಜೂರಾತಿ ಬಗ್ಗೆ ಹಾಗು ಸ್ಮಶಾನ ಭೂಮಿ ಬಗ್ಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳೊಳಗಾಗಿ ಬಗೆಹರಿಸುವಂತೆ ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಭದ್ರಾವತಿ: ತಾಲೂಕಿನಲ್ಲಿ ನಿವೇಶನ ಮತ್ತು ವಸತಿ ರಹಿತರ ಬಗ್ಗೆ, ಭೂ ಮಂಜೂರಾತಿ ಬಗ್ಗೆ ಹಾಗು ಸ್ಮಶಾನ ಭೂಮಿ ಬಗ್ಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳೊಳಗಾಗಿ ಬಗೆಹರಿಸುವಂತೆ ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನೆಯಲ್ಲಿ ಮಾತನಾಡಿ ಪ್ರಮುಖರು, ತಾಲೂಕು ಕಸಬಾ 2ನೇ ಹೋಬಳಿ ಎಚ್.ಕೆ ಜಂಕ್ಷನ್ ಬಿ.ಬಿ ಮೈನ್ಸ್ ಗ್ರಾಮದ ಸರ್ವೆ ನಂ.8ರಲ್ಲಿ 29 ಎಕರೆ ರೆವಿನ್ಯೂ ಜಾಗದಲ್ಲಿ ವಾಸಿಸುತ್ತಿರುವ ಸುಮಾರು 350 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ತಕ್ಷಣ ಕುಡಿಯುವ ನೀರು, ಅಂಗನವಾಡಿ, ವಿದ್ಯುತ್, ರಸ್ತೆ ನಿರ್ಮಾಣ ಮಾಡುವುದು. ಹಿರಿಯೂರು ಗ್ರಾಮದಲ್ಲಿ ಸುಮಾರು 500 ಕುಟುಂಬಗಳು ನಿವೇಶನಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಗೊಂದಿ ಕೈಮರದ ಹತ್ತಿರ ತಾರೀಕಟ್ಟೆ ಸರ್ವೆ ನಂ.41ರಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದು, ಇದನ್ನು ನಿವೇಶನಕ್ಕಾಗಿ ಕಾಯ್ದಿರಿಸಿ ಮಂಜೂರು ಮಾಡುವುದು. ಕಸಬಾ 1ನೇ ಹೋಬಳಿ ಶೆಟ್ಟಿಹಳ್ಳಿ ಅಂಚೆ, ಹಾತಿಕಟ್ಟೆ ಗ್ರಾಮದಲ್ಲಿ ಸುಮಾರು 300 ಕುಟುಂಬಗಳು ನಿವೇಶನ ರಹಿತರಾಗಿರುತ್ತಾರೆ. ಇವರಿಗೂ ಸೂಕ್ತ ಜಾಗ ಗುರುತಿಸಿ ನಿವೇಶನ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

    ಕಾಳಿಂಗನಾಳ್ ಸರ್ವೆ ನಂ.1ರಲ್ಲಿ ಲಭ್ಯವಿರುವ 97 ಎಕರೆ ಸರ್ಕಾರಿ ಭೂಮಿಯಲ್ಲಿ ಹಾಲಿ ಸಾಗುವಳಿ ಮಾಡುತ್ತಿರುವವರಿಗೆ ತಕ್ಷಣ ಸಾಗುವಳಿ ನೀಡಬೇಕು. ಹಿರಿಯೂರು ಸರ್ವೆ ನಂ.37 ಮತ್ತು ಇತರೆಡೆ ಸಾಗುವಳಿ ನೀಡದೇ ಇರುವವರಿಗೆ ತಕ್ಷಣ ಸಾಗುವಳಿ ಮತ್ತು ಖಾತೆ ಮಾಡಿಕೊಡಬೇಕು. ಹೊನ್ನಟ್ಟಿ ಹೊಸೂರು ಸರ್ವೆ ನಂ.29ರ ಸರ್ಕಾರಿ ಭೂಮಿಯಲ್ಲಿ 30-40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ತಕ್ಷಣ ಸಾಗುವಳಿ ನೀಡಬೇಕು. ಕೂಡ್ಲಿಗೆರೆ ಸರ್ವೆ ನಂ.66ರ ಸಾಗುವಳಿ ನೀಡಿರುವ ಕುಟುಂಬಗಳಿಗೆ ತಕ್ಷಣ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

    ಹಿರಿಯೂರು ಗ್ರಾಮದಲ್ಲಿ ಮಂಜೂರಾಗಿರುವ ಹಿಂದೂ ರುದ್ರಭೂಮಿಗೆ ತಕ್ಷಣ ಮೂಲಭೂತ ಸೌಲಭ್ಯ ಒದಗಿಸಬೇಕು. ಕೂಡ್ಲಿಗೆರೆ ಹೋಬಳಿ ಸಿದ್ದರಮಟ್ಟಿ ಗ್ರಾಮದ ಸರ್ವೆ ನಂ.34, 35ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಹಿಂದೂ ರುದ್ರಭೂಮಿ ಮಂಜೂರು ಮಾಡಿಕೊಡಬೇಕು. ಕಸಬಾ-1ನೇ ಹೋಬಳಿ ಶೆಟ್ಟಿಹಳ್ಳಿ ಅಂಚೆ, ಹಾತಿಕಟ್ಟೆ ಗ್ರಾಮಕ್ಕೆ ಹಿಂದೂ ರುದ್ರಭೂಮಿ ಮಂಜೂರು ಮಾಡುವುದು ಹಾಗು ಕಸಬಾ-2ನೇ ಹೋಬಳಿ ಎಚ್.ಕೆ ಜಂಕ್ಷನ್ ಸರ್ವೆ ನಂ. 42ರಲ್ಲಿ ಹಿಂದೂ ರುದ್ರಭೂಮಿ ಅವಶ್ಯಕತೆ ಇದ್ದು, 4 ಎಕರೆ ಜಮೀನು ಮಂಜೂರು ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

    ಪ್ರತಿಭಟನೆಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿರೂಪಾಕ್ಷಪ್ಪ, ಡಿಎಸ್ಎಸ್ ತಾಲೂಕು ಸಂಯೋಜಕ ಕೆ. ರಾಜು, ಸಂಘಟನಾ ಸಂಯೋಜಕರಾದ ಅಣ್ಣಾದೊರೆ, ಮೂರ್ತಿ, ರಂಗಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

No comments:

Post a Comment