Saturday, July 18, 2020

ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಯಿಂದ ವಂಚನೆ

ನ್ಯಾಯ ಒದಗಿಸಿ ಕೊಡಲು ತಹಸೀಲ್ದಾರ್‌ಗೆ ಮನವಿ 

ಭದ್ರಾವತಿ ರಂಗಪ್ಪ ವೃತ್ತದಲ್ಲಿರುವ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಯಿಂದ ವಂಚನೆಗೆ ಒಳಗಾಗಿರುವ ಬಡ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಶನಿವಾರ ತಹಸೀಲ್ದಾರ್ ಶಿವಕುಮಾರ್‌ಗೆ ಸಂಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೧೮: ನಗರದ ರಂಗಪ್ಪ ವೃತ್ತದಲ್ಲಿರುವ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಯಿಂದ ವಂಚನೆಗೆ ಒಳಗಾಗಿರುವ ಬಡ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಶನಿವಾರ ತಹಸೀಲ್ದಾರ್ ಶಿವಕುಮಾರ್‌ಗೆ ಸಂಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು. 
ತಾಲೂಕಿನ ಸಿದ್ದಾಪುರ ತಾಂಡ ನಿವಾಸಿ ದೇವಿಬಾಯಿ ಎಂಬುವರು ಜನವರಿ, ೨೦೧೮ರಲ್ಲಿ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ ೪೫ ಸಾವಿರ ರು. ಸಾಲ ಪಡೆದಿದ್ದು, ಪ್ರತಿ ತಿಂಗಳು ೫೬೦ ರು. ಒಟ್ಟು ೮೭ ಕಂತು ಪಾವತಿಸುವ ಕಂಪನಿ ನಿಯಮದಂತೆ ಬ್ಯಾಂಕ್ ಸಿಬ್ಬಂದಿ ದೀಪಕ್ ಎಂಬುವರಿಗೆ ಪ್ರತಿ ತಿಂಗಳು ಹಣ ಪಾವತಿಸಿರುತ್ತಾರೆ. ಆದರೆ ಸಿಬ್ಬಂದಿ ಕಂಪನಿಗೆ ಹಣ ಪಾವತಿ ಮಾಡದೆ ವಂಚಿಸಿದ್ದು, ಕೆಲಸ ಬಿಟ್ಟು ನಾಪತ್ತೆಯಾಗಿರುತ್ತಾನೆ. ಈ ನಡುವೆ ಕಂಪನಿ ಅಧಿಕಾರಿಗಳು ಪೂರ್ಣ ಹಣ ಪಾವತಿ ಮಾಡುವಂತೆ ದೇವಿಬಾಯಿಗೆ ಒತ್ತಾಯಿಸುತ್ತಿದ್ದಾರೆಂದು ಆರೋಪಿಸಲಾಗಿದೆ. 
ಕಂಪನಿ ವಿಭಾಗೀಯ ವ್ಯವಸ್ಥಾಪಕರನ್ನು ಈ ಸಂಬಂಧ ಹಲವು ಬಾರಿ ದೇವಿಬಾಯಿಯವರು ಸಂಪರ್ಕಿಸಿ ಅನ್ಯಾಯವಾಗಿರುವುದನ್ನು ಮನವರಿಕೆ ಮಾಡಿಕೊಟ್ಟರೂ ಸಹ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದು, ಸಿಬ್ಬಂದಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಇತ್ತೀಚೆಗೆ ದೇವಿಬಾಯಿಯವರ ಪತಿ ಪಾಪನಾಯ್ಕರವರು ಅನಾರೋಗ್ಯದಿಂದ ನಿಧನ ಹೊಂದಿದ್ದು, ಬಡತನದಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಮಹಿಳೆಗೆ ಈ ಸಾಲದ ಹೊರೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕಂಪನಿಯವರನ್ನು ಕರೆಸಿ ಆಗಿರುವ ಅನ್ಯಾಯ ಸರಿಪಡಿಸಿಕೊಡಬೇಕೆಂದು ಮನವಿ ಮಾಡಲಾಗಿದೆ. ಒಂದು ವೇಳೆ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ. 
ಪಕ್ಷದ ಯುವ ಮುಖಂಡ ಬಾಬು ದೀಪಕ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ವಂಚನೆಗೆ ಒಳಗಾಗಿರುವ ದೇವಿಬಾಯಿ, ರಘು, ಸುಭಾಷ್ ಮತ್ತು ಅಬ್ದುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment