ಭದ್ರಾವತಿ, ಮಾ. ೫: ಯಾವುದೇ ನೋಂದಾಯಿತ ಮಾನವ ಹಕ್ಕು ಹೋರಾಟ ಸಮಿತಿ ಅಧ್ಯಕ್ಷನಾಗಿರದಿದ್ದರೂ ಸಹ ಬಿ.ಎನ್ ರಾಜು ಎಂಬಾತ ನನ್ನ ವಿರುದ್ಧ ಸುಳ್ಳು ಜಾತಿನಿಂದನೆ ದೂರು ದಾಖಸುವುದಾಗಿ ಹೇಳಿ ಜೀವ ಬೆದರಿಕೆ ಹಾಕುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ.
ಸಮಾಜದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಜಾತಿಬೇಧಭಾವವಿಲ್ಲದೆ, ಯಾವುದೇ ಫಲಾಫೇಕ್ಷೆ ಇಲ್ಲದೆ ದೀನದಲಿತರ, ನೊಂದ ಬಡವರ, ಹಿಂದುಳಿದ ವರ್ಗದ ಜನರ ಕುಂದುಕೊರತೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜೊತೆಗೆ ರೈತ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ವೈಯಕ್ತಿಕ ಹಾಗು ರಾಜಕೀಯ ಬೆಳವಣಿಗೆಯನ್ನು ಸಹಿಸದ ಬಿ.ಎನ್ ರಾಜು ಎಂಬಾತ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಘನತೆಗೆ ಕುಂದು ತರುವಂತೆ ಮಾಡಿ ಸುಳ್ಳು ಜಾತಿನಿಂದನೆ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
ಈತ ಯಾವುದೇ ನೋಂದಾಯಿತ ಸಂಘ-ಸಂಸ್ಥೆ ಅಧ್ಯಕ್ಷನಾಗಿರದಿದ್ದರೂ ಸಹ ಅಧ್ಯಕ್ಷ ಎಂದು ಹೇಳಿಕೊಂಡು ರಾಜಕಾರಣಿಗಳು, ಉನ್ನತ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್‌ಮೇಲೆ ಮಾಡಿಕೊಂಡು ಬಂದಿರುತ್ತಾನೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಗೂ ಸಹ ಬಹಿರಂಗವಾಗಿ ಅವಹೇಳನಕಾರಿಯಾಗಿ ನಿಂದಿಸಿಕೊಂಡು ಹಾಗು ಜಾತಿಯನ್ನು ದುರ್ಬಳಕೆ ಮಾಡಿಕೊಂಡು ಜಾತಿನಿಂದನೆ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಅಲ್ಲದೆ ಈತ ಈ ಹಿಂದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಜೈಲು ಶಿಕ್ಷೆ ಸಹ ಅನುಭವಿಸಿರುತ್ತಾನೆ. ಅಲ್ಲದೆ ಈತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿವೆ.
ಈ ಹಿನ್ನಲೆಯಲ್ಲಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
No comments:
Post a Comment