Friday, March 5, 2021

ಸ್ವಾರ್ಥಕ್ಕಾಗಿ ಬೆತ್ತಲಾದ ಸಂಗಮೇಶ್ವರ : ಪ್ರವೀಣ್ ಪಟೇಲ್

ಜಿ.ಆರ್ ಪ್ರವೀಣ್ ಪಟೇಲ್
    ಭದ್ರಾವತಿ, ಮಾ. ೫: ಶಾಸಕ ಬಿ.ಕೆ.ಸಂಗಮೇಶ್ವರ ಅವರು ಸದನದಲ್ಲಿ ಅಂಗಿ ಬಿಚ್ಚುವ ಮೂಲಕ ಮತ್ತೊಮ್ಮೆ ತಮ್ಮ ಕುಟುಂಬದ ಸಾರ್ಥಕ್ಕಾಗಿ ಬೆತ್ತಲಾಗಿದ್ದಾರೆ ಎಂದು ಬಿಜೆಪಿ ಮುಖಂಡ ಜಿ.ಆರ್.ಪ್ರವೀಣ್ ಪಟೇಲ್ ಟೀಕಿಸಿದ್ದಾರೆ.
   ತಮ್ಮ ಜೀವನದಲ್ಲಿ ಎಂದೂ ಕ್ಷೇತ್ರದ ಜನರ ಪರ ಧ್ವನಿ ಎತ್ತದ ಅವರಿಗೆ ತಾವು ಮತ್ತು ತಮ್ಮ ಕುಟುಂಬ ಹೊರತಾಗಿ ಏನೂ ಕಾಣುವುದಿಲ್ಲ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳಿಗಿಂತ ಕುಟುಂಬದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾರೆ. ಸದನದಲ್ಲಿ ಅಂಗಿ ಕಳಚುವ ಮೂಲಕ ಕ್ಷೇತ್ರದ ಜನರಿಗೂ ಮುಜುಗರ ತಂದಿದ್ದಾರೆ. ಇಂತಹ ನಡೆ ಸಭ್ಯ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
   ತಮ್ಮ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ದೂರುವ ಅವರು ಮೊದಲು ಗೂಂಡಾಗಿರಿ ವರ್ತನೆ ತಿದ್ದಿಕೊಳ್ಳಬೇಕು. ಆಟದ ಉತ್ಸಾಹದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದ ನೆಪ ಇಟ್ಟುಕೊಂಡು ಬಿಜೆಪಿ, ಭಜರಂಗ ದಳದ ಮುಖಂಡರು, ಕಾರ್ಯಕರ್ತರ ಮೇಲೆ ಶಾಸಕರು, ಅವರ ಮಕ್ಕಳು ಗಂಭೀರ ಹಲ್ಲೆ ನಡೆಸಿದ್ದಾರೆ. ಹಿಂಸೆ ಮೂಲಕವೇ ರಾಜಕೀಯ ಬದುಕು ಕಟ್ಟಿಕೊಂಡಿದ್ದಾರೆ. ಅವರ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
   ಮುಖ್ಯಮಂತ್ರಿಗಳು, ಸಂಸದರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ವಿರುದ್ಧ ಮಾತನಾಡುವ ನೈತಿಕತೆ ಶಾಸಕರಿಗಿಲ್ಲ. ಅದರಲ್ಲೂ ಕೀಳುಮಟ್ಟದಲ್ಲಿ ಮಾತನಾಡುವುದು ಶಾಸಕರ ವ್ಯಕ್ತಿತ್ವ ತೋರಿಸುತ್ತದೆ. ಶಾಸಕರು ತಮ್ಮ ನಡೆ ತಿದ್ದಿಕೊಳ್ಳದಿದ್ದರೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದ್ದಾರೆ.

No comments:

Post a Comment