ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಎಂಪಿಎಂ ಹೆಚ್.ತಿಮ್ಮಪ್ಪ ಅಧಿಕಾರ ಸ್ವೀಕಾರ
ಭದ್ರಾವತಿ ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಎಂಪಿಎಂ ಹೆಚ್.ತಿಮ್ಮಪ್ಪ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ಕಸಾಪ ಬಾವುಟ ಹಸ್ತಾಂತರಿಸಿದರು.
ಭದ್ರಾವತಿ: ಕನ್ನಡದ ತೇರು ಎಳೆಯಲು ಸದಾಕಾಲ ಶ್ರಮಿಸುತ್ತಿದ್ದು, ಪ್ರಸ್ತುತ ಜವಾಬ್ದಾರಿ ಹೆಚ್ಚಿರುವುದರಿಂದ ಮತ್ತಷ್ಟು ಆಸಕ್ತಿ ವಹಿಸಿ ಕನ್ನಡದ ಸೇವೆ ಮಾಡುವುದಾಗಿ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕ ಮುಖಂಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಎಚ್ ತಿಮ್ಮಪ್ಪ ಭರವಸೆ ವ್ಯಕ್ತಪಡಿಸಿದರು.
ಅವರು ನ್ಯೂಟೌನ್‌ನಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಆಯವ್ಯಯ ಮಂಡನಾ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
೫ ವರ್ಷಗಳ ಅಧಿಕಾರದ ಅವಧಿಯನ್ನು ಒಡಂಬಡಿಕೆಯಂತೆ ಹಂಚಿಕೊಂಡಿದ್ದು, ೩ನೇ ಮತ್ತು ಕಡೇಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ಪರಿಷತ್‌ನಲ್ಲಿ ಹತ್ತಾರು ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಸ್ತುತ ಕಾರ್ಯದರ್ಶಿಯಾಗಿದ್ದು, ಇದೀಗ ಜಿಲ್ಲಾಧ್ಯಕ್ಷರು ನನ್ನನ್ನು ನೇಮಕಗೊಳಿಸಿದ್ದಾರೆ ಎಂದರು.
ಪ್ರಾಮಾಣಿಕವಾಗಿ ಯಾವುದೇ ಲೋಪದೋಷಗಳಿಲ್ಲದೆ ಎಲ್ಲರ ಸಹಕಾರ ಪಡೆದು ವಿಭಿನ್ನ ಕಾರ್ಯಕ್ರಮಗಳ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಕನ್ನಡದ ಕೆಲಸಗಳಿಗೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ನೂತನ ಅಧ್ಯಕ್ಷರಿಗೆ ಕಸಾಪ ಬಾವುಟ ಹಸ್ತಾಂತರ ಮಾಡಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸರ್ವರೂ ನೀಡಿದ ಸಹಕಾರ ಅಮೂಲ್ಯವಾದದ್ದು. ಸದಾ ಕಾಲ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ನನ್ನ ಬೆಂಬಲವಿರುತ್ತದೆ ಎಂದರು.
ಖಜಾಂಚಿ ಪ್ರಸನ್ನಕುಮಾರ್ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ತಿಮ್ಮಪ್ಪ ವರದಿ ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಹೊಳೆಹೊನ್ನೂರು ಹೋಬಳಿ ಅಧ್ಯಕ್ಷ ಚೆನ್ನಪ್ಪ, ಮುಖಂಡರುಗಳಾದ ನಾಗೋಜಿರಾವ್, ಪ್ರಶಾಂತ್, ಕಮಲಾಕರ್, ಎಂ.ಎಸ್.ಸುಧಾಮಣಿ, ತಿಪ್ಪಮ್ಮ, ಪ್ರಕಾಶ್ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಕಾರ್ಯದರ್ಶಿ ಎಂ.ಇ.ಜಗದೀಶ್ ನಿರೂಪಿಸಿ, ಪ್ರಸನ್ನಕುಮಾರ್ ಸ್ವಾಗತಿಸಿ, ಮೋಹನ್ ವಂದಿಸಿದರು.
No comments:
Post a Comment