Thursday, November 28, 2024

ತರೀಕೆರೆ ರಸ್ತೆಯ ಬೀದಿಬದಿ ವ್ಯಾಪಾರಿಗಳಿಗೆ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಪುಡ್ ಕೋರ್ಟ್

ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ಸಭೆ 

ಭದ್ರಾವತಿ ನಗರಸಭೆ ವತಿಯಿಂದ ನಗರದ ತರೀಕೆರೆ ರೈಲ್ವೆ ಮೇಲ್ಸೇತುವೆ ಕೆಳಗೆ ಪುಡ್ ಕೋರ್ಟ್ ನಿರ್ಮಿಸುವ ಸಂಬಂಧ ಗುರುವಾರ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 
    ಭದ್ರಾವತಿ: ನಗರದ ತರೀಕೆರೆ ರಸ್ತೆಯ ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆ ವತಿಯಿಂದ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸುವ ಸಂಬಂಧ ಗುರುವಾರ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು. 
    ತರೀಕೆರೆಯ ರಸ್ತೆ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೧೩, ೧೬ ಮತ್ತು ೧೭ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸುಸಜ್ಜಿತವಾದ ಪುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪುಡ್‌ಕೋರ್ಟ್ ಸಂಬಂಧ ನಡೆಯುತ್ತಿರುವ ೩ನೇ ಸಭೆ ಇದಾಗಿದೆ. ಇದು ಅಂತಿಮ ಸಭೆ ಎಂದು ವ್ಯಾಪಾರಿಗಳು ಭಾವಿಸಿಕೊಳ್ಳಬೇಕು. ಈ ಹಿಂದೆ ಮಹಾತ್ಮಗಾಂಧಿ ವೃತ್ತದ ಬಳಿ ಪುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಈ ಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸುವುದರಿಂದ ಜನಸಂದಣಿ ಹೆಚ್ಚಾಗುವ ಜೊತೆಗೆ ವ್ಯಾಪಾರಕ್ಕೆ ತೊಂದರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ಇದೀಗ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ವ್ಯಾಪಾರಸ್ಥರು ಸಹಕರಿಸಬೇಕೆಂದು ಹಿರಿಯ ಸದಸ್ಯ ಬಿ.ಕೆ ಮೋಹನ್ ಮನವಿ ಮಾಡಿದರು. 
    ಪುಡ್ ಕೋರ್ಟ್ ನೀಲನಕ್ಷೆ ಸಹಿತ ನಗರಸಭೆ ಇಂಜಿನಿಯರ್ ಸಂತೋಷ್ ಪಾಟೀಲ್ ವಿವರವಾದ ಮಾಹಿತಿ ನೀಡಿದರು. ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಬೀದಿ ವ್ಯಾಪಾರಸ್ಥರ ಹಿತರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ. ಯಾರು ಸಹ ಆತಂಕಪಡುವುದು ಬೇಡ ಎಂದರು. 

ಪುಡ್ ಕೋರ್ಟ್ ವಿವರ: 

ಪುಡ್ ಕೋರ್ಟ್ ಒಟ್ಟು ೧೬ ಮೀಟರ್ ಉದ್ದ ಹಾಗು ೮ ಮೀಟರ್ ಅಗಲವಿದ್ದು, ಮಧ್ಯದಲ್ಲಿ ರಸ್ತೆ, ಎರಡು ಬದಿ ಮಳಿಗೆಗಳು. ಎರಡು ಕಡೆ ಶೌಚಾಲಯ, ಎರಡು ಕಡೆ ಮಧ್ಯದಲ್ಲಿ ೧ ಮೀಟರ್ ಅಗಲದ ರಸ್ತೆ,  ಸದ್ಯದ ನೀಲನಕ್ಷೆಯಲ್ಲಿ ೩*೩ ಅಳತೆಯಲ್ಲಿ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ೨೬ ವ್ಯಾಪಾರಿಗಳಿಗೆ ಬೇಡಿಕೆಗಳು ಬಂದಿರುವ ಹಿನ್ನಲೆಯಲ್ಲಿ ಮಳಿಗೆಗಳ ವಿಸ್ತೀರ್ಣ ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ೨.೫ ಕೋ. ರು. ವೆಚ್ಚೆದಲ್ಲಿ ಪುಡ್ ಕೋರ್ಟ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ತಿರಸ್ಕಾರಗೊಂಡಿದ್ದು, ಇದೀಗ ನಗರಸಭೆ ಅನುದಾನದಲ್ಲಿ ಪುಡ್ ಕೋರ್ಟ್ ನಿರ್ಮಿಸಲಾಗುತ್ತಿದೆ. 

    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯ ವಿ. ಕದಿರೇಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುದೀಪ್ ಕುಮಾರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತರೀಕೆರೆ ರಸ್ತೆಯ ಬಹುತೇಕ ಬೀದಿಬದಿ ವ್ಯಾಪಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment