ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆಗೆ ನಿರ್ಧಾರ
ಭದ್ರಾವತಿ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಸಭೆ ನಡೆಯಿತು.
ಭದ್ರಾವತಿ, ಸೆ. ೧೦: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್‌ರವರ ಮೇಲಿನ ಪೊಲೀಸ್ ದೌರ್ಜನ್ಯವನ್ನು ನಗರದ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
ಗುರುವಾರ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು ಅಶೋಕ್‌ರವರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಸೌಹಾರ್ದತೆ ನೆಲೆಗಟ್ಟಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ಕುಟುಂಬ ಸಮೇತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ತೆರಳಿದ್ದಾಗ ಅಲ್ಲಿನ ಪೊಲೀಸರು ಕ್ಷಲ್ಲಕ ಕಾರಣ ಮುಂದಿಟ್ಟುಕೊಂಡು ಅವಮಾನಿಸಿದ್ದಾರೆ. ಇದನ್ನು ಸಂಘಟನೆ ಖಂಡಿಸುತ್ತದೆ ಎಂದರು.
ಉದ್ದೇಶಪೂರ್ವಕವಾಗಿ ಅಶೋಕ್‌ರವರನ್ನು ಅವಮಾನಿಸಿ ದರ್ಪದಿಂದ ವರ್ತಿಸಿರುವ ಪೊಲೀಸ್ ಸಿಬ್ಬಂದಿ ಹಾಗು ಠಾಣಾಧಿಕಾರಿಯನ್ನು ತಕ್ಷಣ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಈ ಸಂಬಂಧ ವಿವಿಧ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದು, ನಗರದಲ್ಲೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದರು.
ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಜೆಬಿಟಿ ಬಾಬು, ಎಚ್. ರವಿಕುಮಾರ್, ಇಬ್ರಾಹಿಂ ಖಾನ್, ಈ.ಪಿ ಬಸವರಾಜ್, ರಾಜೇಂದ್ರ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
No comments:
Post a Comment