ಭದ್ರಾವತಿಯಲ್ಲಿ ಭಾನುವಾರ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೬ನೇ ಆರಾಧನೆ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಶಾಸಕರ ನಿಧಿಯಿಂದ ೨೫ ಲಕ್ಷ ರು. ಅನುದಾನದ ಮಂಜೂರಾತಿ ಪತ್ರವನ್ನು ಸಮಾಜದ ಅಧ್ಯಕ್ಷರಿಗೆ ಸ್ವಾಮೀಜಿಯವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಭದ್ರಾವತಿ, ಮಾ. ೨೮: ಬಲಿಜ ಸಮಾಜದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
ಅವರು ಭಾನುವಾರ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೬ನೇ ಆರಾಧನೆ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಲಿಜ ಸಮಾಜಕ್ಕೆ ಮೀಸಲಾತಿ ನೀಡುವ ಸಂಬಂಧ ಸಮಾಜದವರು ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸುವ ಜೊತೆಗೆ ಸಮಾಜದ ಮುಖಂಡರೊಂದಿಗೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸುವ ಜೊತೆಗೆ ಇನ್ನೂ ಹೆಚ್ಚಿನ ನೆರವು ನೀಡಲು ಸಿದ್ದನಿದ್ದೇನೆ. ಎಲ್ಲಾ ಸಮಾಜದವರು ನಮ್ಮೊಂದಿಗಿದ್ದಾರೆ. ವಿನಃಕಾರಣ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಸದಾಕಾಲ ಬೆಂಬಲ ನೀಡುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿ ಮಾತನಾಡಿ, ಬಲಿಜ ಸಮಾಜ ಜನಸಂಖ್ಯೆಯಲ್ಲಿ ಚಿಕ್ಕ ಸಮುದಾಯವಾದರೂ ಸಂಘಟನೆಯಲ್ಲಿ ಬಲಿಷ್ಠವಾಗಿದೆ. ಸಮಾಜದ ಎಲ್ಲಾ ಸಮುದಾಯಗಳೊಂದಿಗೆ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿಯೊಬ್ಬರು ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ನೀಡಬೇಕು. ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಇಂದಿಗೂ ಸ್ಮರಿಸುತ್ತೇವೆ. ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು ಕೊನೆಯವರೆಗೂ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಮುನ್ನಡೆಬೇಕೆಂದರು.
ಬಲಿಜ ಸಮಾಜಕ್ಕೆ ಮೀಸಲಾತಿ ನೀಡುವ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಚಳುವಳಿ ನಡೆಸಲಾಯಿತು. ಸಂಘದ ಅಧ್ಯಕ್ಷ ಎಸ್.ಎನ್ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು.
ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್ ನಿರೂಪಿಸಿದರು.
ಗೌರವಾಧ್ಯಕ್ಷ ವೈ.ಎಸ್ ರಾಮಮೂರ್ತಿ, ಉಪಾಧ್ಯಕ್ಷರಾದ ಪದ್ಮಮ್ಮ ಹನುಮಂತಪ್ಪ, ಜೆ.ಎಸ್ ಸಂಜೀವಮೂರ್ತಿ, ಖಜಾಂಚಿ ಕೆ.ಜಿ. ಕುಮಾರಸ್ವಾಮಿ, ಸಹಕಾರ್ಯದರ್ಶಿ ದಶರಥಕುಮಾರ್, ಸಂಘಟನಾ ಕಾರ್ಯದರ್ಶಿ ಜಂಗಮಪ್ಪ ಸೇರಿದಂತೆ ಸಂಘದ ನಿರ್ದೇಶಕರು ಸೇರಿದಂತೆ ತಾಲೂಕಿನ ನಗರ ಹಾಗು ಗ್ರಾಮಾಂತರ ಭಾಗಗಳಿಂದ ಆಗಮಿಸಿದ್ದ ಬಲಿಜ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
No comments:
Post a Comment