Friday, March 3, 2023

ಗುರುಭವನ ನೆಲಸಮ : 2 ಕೋ.ರು. ವೆಚ್ಚದ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ



ಭದ್ರಾವತಿ  ಮಾ. 3: ಸುಮಾರು ಒಂದು ದಶಕದಿಂದ ಪಾಳು ಬಿದ್ದಿದ್ದ ಶಿಕ್ಷಣ ಇಲಾಖೆಗೆ ಸೇರಿದ ಗುರುಭವನ ಇದೀಗ ನೆಲಸಮಗೊಂಡಿದ್ದು, ಇದೆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ.
   ತಾಲೂಕಿನಲ್ಲಿ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿದ್ದು, ಶಿಕ್ಷಕರ ಅನುಕೂಲಕ್ಕಾಗಿ ಸುಮಾರು 5-6 ದಶಕಗಳ ಹಿಂದೆ  ತಾಲೂಕು ಕಚೇರಿ ರಸ್ತೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಗುರುಭವನ ನಿರ್ಮಿಸಲಾಗಿತ್ತು. ಆರಂಭದಲ್ಲಿ ಶಿಕ್ಷಕರ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಶಿಕ್ಷಕರ ತರಬೇತಿ  ಸೇರಿದಂತೆ ಇನ್ನಿತರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದವು.  
    ಕಳೆದ ಸುಮಾರು ಒಂದು ದಶಕದಿಂದ ಈ ಭವನ ಪಾಳು ಬಿದ್ದಿದ್ದು, ಕೆಲವು ವರ್ಷಗಳ ವರೆಗೆ ಉಚಿತ ಸೈಕಲ್ ವಿತರಣೆಯ ಗೋದಾಮಾಗಿ ಬಳಸಿಕೊಳ್ಳಲಾಗಿತ್ತು.  ಹೊಸ ಗುರು ಭವನ ನಿರ್ಮಾಣಕ್ಕೆ ಶಿಕ್ಷಕರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ,  ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.  
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್.  ಷಡಾಕ್ಷರಿ, ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಹಾಗೂ ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ ರವರ ಗಮನಸೆಳೆದು ಸುಮಾರು ಒಂದೂವರೆ ವರ್ಷದ ಹಿಂದೆ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಗೆ 1 ಕೋ.ರು, ಗುರು ಭವನ ನಿರ್ಮಾಣಕ್ಕೆ 2 ಕೋ. ರು. ಹಾಗು ನ್ಯೂಟೌನ್ ವಿಐಎಸ್ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು 3.5 ಕೋ.ರು. ಅನುದಾನ ಸರ್ಕಾರದಿಂದ ಮಂಜುರಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಐದಾರು ದಿನಗಳಿಂದ ಶಿಥಿಲಗೊಂಡಿದ್ದ ಗುರುಭವನ ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದೆ. 

 

No comments:

Post a Comment