Wednesday, April 6, 2022

ಮತದಾನ ಹಕ್ಕಿನ ಮಹತ್ವ ತಿಳಿಯದೆ ಉತ್ತಮ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ : ಎ.ಡಿ ಶಿವಪ್ಪ

 ಬಹುಜನ ಸಮಾಜ ಪಾರ್ಟಿ ಭದ್ರಾವತಿ ತಾಲೂಕು ಘಟಕದ ವತಿಯಿಂದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ಏ. ೬: ದೇಶದಲ್ಲಿ ನಾವು ಎಲ್ಲಿಯವರೆಗೆ ಮತದಾನ ಹಕ್ಕಿನ ಮಹತ್ವ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಉತ್ತಮ ಸರ್ಕಾರ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ಪಕ್ಷದ ಜಿಲ್ಲಾಧ್ಯಕ್ಷ ಎ.ಡಿ ಶಿವಪ್ಪ ಹೇಳಿದರು.
ಅವರು ಬುಧವಾರ ನಗರದ ಬಿ.ಎಚ್ ರಸ್ತೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಈ ದೇಶದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಶೇ.೮೫ರಷ್ಟಿದ್ದು, ಆದರೆ ಶೇ.೩ರಷ್ಟಿರುವ ಮನುವಾದಿಗಳು ಆಡಳಿತ ನಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ದೇಶದ ಬಹಳಷ್ಟು ಜನರಿಗೆ ಮತದಾನದ ಬೆಲೆ ಗೊತ್ತಿಲ್ಲ. ಇದೀಗ ಪಕ್ಷದ ವತಿಯಿಂದ ಮತದಾನದ ಬೆಲೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಬಿಎಸ್‌ಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ನೂ ಹೆಚ್ಚಿನ ಕ್ರಿಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಿ, ಬಹುಜನ ಚಳುವಳಿ ನಡೆದು ಬಂದ ದಾರಿ. ದೇಶದ ಮೂಲ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರಗಳನ್ನು ವಿವರಿಸಿದರು. ಪಕ್ಷದ ಜಿಲ್ಲಾ ಸಂಯೋಜಕ ಎಚ್.ಎನ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಎಂ. ರಾಜೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

No comments:

Post a Comment