Wednesday, April 6, 2022

ಮುಂಬರುವ ಚುನಾವಣೆಗೆ ಬಿಎಸ್‌ಪಿ ಸಿದ್ದತೆ : ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದಿಂದ ಕುತಂತ್ರ : ನಾಗೇಂದ್ರ ಆರೋಪ

ಭದ್ರಾವತಿಯಲ್ಲಿ  ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಮಾತನಾಡಿದರು.
    ಭದ್ರಾವತಿ, ಏ. ೬: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಮುಂಬರುವ ವಿಧಾನಸಭಾ ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಇದೀಗ ರಾಜ್ಯಾದ್ಯಂತ ವಿಭಿನ್ನ ರೀತಿಯ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಹೇಳಿದರು.
    ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಸಂಘಟನಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಪಕ್ಷದ ಸಂಸ್ಥಾಪಕರಾದ ಕಾನ್ಸಿರಾಂರವರ ಜನ್ಮದಿನದಂದು ರಾಜ್ಯದ ೪ ವಿಭಾಗಗಳಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲಾಗಿದೆ. ಸಮಾವೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಜೊತೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ರೂಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಜಿಲ್ಲಾಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲಾಗಿದ್ದು, ಇದೀಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಈ ಕಾರ್ಯಗಾರದಲ್ಲಿ ಬಹುಜನ ಚಳುವಳಿಯ ಹಿನ್ನಲೆ, ನಡೆದು ಬಂದ ದಾರಿ, ದೇಶದ ಮೂಲ ನಿವಾಸಿಗಳು ಎದುರಿಸುತ್ತಿರುವ ಸವಾಲುಗಳು ಹಾಗು ಹೋರಾಟದ ರೂಪುರೇಷೆಗಳ ಕುರಿತು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಮಾಯಾವತಿ ಪ್ರಚಾರ:
    ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿಯವರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಅವರು ಆಗಮಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
    ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕುತಂತ್ರ :
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ಉಂಟು ಮಾಡಿ ಆಶಾಂತಿ ವಾತಾವರಣ ರೂಪಿಸುತ್ತಿದೆ. ಹಿಜಾಬ್, ಹಲಾಲ್, ದೇವಸ್ಥಾನಗಳ ಬಳಿ ಹಾಗು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಎಲ್ಲವೂ ಸಂವಿಧಾನ ಬಾಹಿರವಾಗಿವೆ. ಮತ್ತೊಂದೆಡೆ ಈ ವಿಚಾರಗಳನ್ನು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸೇರಿದಂತೆ ಬಿಜೆಪಿ ಅಂಗಸಂಸ್ಥೆಗಳು, ಸಂಘಟನೆಗಳು ಗುಮಾನಿ ಮಾಡುವ ಮೂಲಕ ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವನ್ನು ನಿಯಂತ್ರಿಸುತ್ತಿವೆ. ಅಲ್ಲದೆ ಈ ಸಂಘಟನೆಗಳು ದೇಶ ದ್ರೋಹದ ಹೇಳಿಕೆಗಳನ್ನು ನೀಡುತ್ತಿವೆ. ದೇಶ ದ್ರೋಹದ ನಿಲುವುಗಳನ್ನು ಪ್ರಕಟಿಸುತ್ತಿವೆ ಆದರೂ ಸಹ ಇವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
    ಬಿಎಸ್‌ಪಿ ಈ ಎಲ್ಲಾ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಲು ಮುಂದಾಗಿದೆ ಎಂದರು.
    ಪಕ್ಷದ ಜಿಲ್ಲಾ ಸಂಯೋಜಕ ಎಚ್.ಎನ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರಹಮತ್‌ಉಲ್ಲಾ ಖಾನ್, ತಾಲೂಕು ಸಂಯೋಜಕ ಎಂ. ರಾಜೇಂದ್ರ ಉಪಸ್ಥಿತರಿದ್ದರು.

No comments:

Post a Comment