ಪಠ್ಯಪುಸ್ತಕ ಬದಲಾವಣೆ ಕೈಬಿಡಿ, ಪ್ರತ್ಯೇಕ ನಿಗಮ ಸ್ಥಾಪಿಸಿ : ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಆಗ್ರಹ
ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಸೋಮವಾರ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜು. ೪: ರಾಜ್ಯದ ಜನಸಂಖ್ಯೆಯಲ್ಲಿ ೪ನೇ ಸ್ಥಾನದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ಸಮಾಜವನ್ನು ಕಡೆಗಣಿಸುವ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಮುಂದಾಗಿವೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ್ರಮುಖ್ ಪ್ರವೀಣ್, ತಾಲೂಕು ಅಧ್ಯಕ್ಷ ಎನ್. ನಟರಾಜ್ ಸೇರಿದಂತೆ ಇನ್ನಿತರರು, ಹಿಂದುಳಿದ ವರ್ಗದವರು ಎಂಬ ಏಕೈಕ ಕಾರಣಕ್ಕೆ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ದೆಹಲಿಯಲ್ಲಿ ಜನವರಿ-೨೬ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬ್ರಹಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನೀಡದೆ ಗುರುಗಳನ್ನು ಅವಮಾನಿಸಿರುವ ಘಟನೆಯನ್ನು ಸಮಾಜ ಇನ್ನೂ ಮರೆತ್ತಿಲ್ಲ. ಈಗಿರುವಾಗ ರಾಜ್ಯ ಸರ್ಕಾರ ಇದೀಗ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ೧೦ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು ಕನ್ನಡ ಪಠ್ಯ ಪುಸ್ತಕಕ್ಕೆ ಬದಾಯಿಸುವ ಮೂಲಕ ಮತ್ತೊಮ್ಮೆ ಅವಮಾನಗೊಳಿಸುವ ನಿಟ್ಟಿನಲ್ಲಿ ತೊಡಗಿದೆ. ಇದನ್ನು ವೇದಿಕೆ ಖಂಡಿಸುವ ಜೊತೆಗೆ ಕನ್ನಡ ಪಠ್ಯ ಪುಸ್ತಕಕ್ಕೆ ಬದಲಾಯಿಸಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು ಪೆರಿಯಾರ್ ಅವರ ಜೀವನ ಚರಿತ್ರೆ ೧೦ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಪ್ರಾರಂಭವಾದ ಹೋರಾಟ ಆ ನಂತರದ ದಿನಗಳಲ್ಲಿ ಭಗತ್ ಸಿಂಗ್ ಚರಿತ್ರೆ ಕೈಬಿಟ್ಟಿರುವುದು ಜೊತೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್‌ರವರ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಲಿಂಗಾಯಿತ, ಒಕ್ಕಲಿಗ ಸಮಾಜ ಮುಂತಾದ ಮೇಲ್ವರ್ಗಗಳ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜಿಸುವುದರ ಜೊತೆಗೆ ಕುವೆಂಪು ಮತ್ತು ಬಸವಣ್ಣನವರ ಚರಿತ್ರೆಯಲ್ಲಿ ಆಗಿರುವ ಕೆಲವು ಲೋಪದೋಷಗಳನ್ನು ಸರಿಪಡಿಸುವ ಮೂಲಕ ಮೇಲ್ವರ್ಗಗಳನ್ನು ಓಲೈಸಲು ಮುಂದಾಗಿರುವುದು ತಿಳಿದುಬಂದಿದೆ.
ಆದರೆ ಹಿಂದುಳಿದ ವರ್ಗಗಳ ಉನ್ನತಿಯ ಹರಿಕಾರ, ಕೇರಳದಲ್ಲಿ ಮೇಲ್ವರ್ಗದವರ ಅನಾಚಾರ, ದಬ್ಬಾಳಿಕೆಯಿಂದಾಗಿ ಮತಾಂತರವಾಗುತ್ತಿದ್ದ ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ, ಶಕ್ತಿಯಾಗಿ ಅವರನ್ನು ಹಿಂದುತ್ವದಲ್ಲಿ ಉಳಿಸಿ ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಮಹಾನ್ ಸಂತ, ವಿದ್ಯೆಯ ಮಹತ್ವ ಸಮಾಜಕ್ಕೆ ತಿಳಿಸಿಕೊಟ್ಟು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡಲೇಬೇಕಾದ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ತೆಗೆದು ವಿದ್ಯಾರ್ಥಿಗಳಿಗೆ ಐಚ್ಚಿಕವಾದ ಕನ್ನಡ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಹಿಂದುಳಿದ ಸಮಾಜದ ಕಣ್ಣೊರೆಸುವ ತಂತ್ರ ಮಾಡಲಾತ್ತಿದೆ ಎಂದು ಆರೋಪಿಸಿದರು. ಇದನ್ನು ಸಮಾಜ ಯಾವತ್ತಿಗೂ ಒಪ್ಪುತ್ತಿಲ್ಲ. ಈಗಾಗಲೇ ಈ ಕುರಿತು ಈ ಹಿಂದೆಯೇ ಸಮಾಜದ ಗಣ್ಯರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೇ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆ ಮುಂದುವರೆಸಬೇಕೆಂದು ಆಗ್ರಹಿಸಿದರು.
ರಾಜ್ಯದ ಜನಸಂಖ್ಯೆಯಲ್ಲಿ ೪ನೇ ಸ್ಥಾನದಲ್ಲಿರುವ ಈಡಿಗ, ಬಿಲ್ಲವ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡಿರುವ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಹೋರಾಟದ ನಂತರ ಇತ್ತೀಚಿಗೆ ಕೆಲವು ಸಮಾಜಗಳು ಬೇಡಿಕೆ ಸಲ್ಲಿಸಿದ ತಕ್ಷಣ ಪ್ರತ್ಯೇಕ ನಿಗಮ ಮಂಡಳಿ ರಚಿಸಿ ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರೆ ನಮ್ಮ ಸಮಾಜಕ್ಕೆ ಪ್ರತ್ಯೇಕ ನಿಗಮ ರಚಿಸುವಲ್ಲಿ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆ ತಾಲೂಕು ಗೌರವಾಧ್ಯಕ್ಷ ವಸಂತ ಬಿ. ಪೂಜಾರಿ, ಬಿ. ಲೋಕನಾಥ್, ಕೋಗಲೂರು ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಆರ್. ಚಂದ್ರಶೇಖರ್, ಕೆ.ಎನ್ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment