Friday, April 15, 2022

ಈಜಲು ಹೋದ ವಿದ್ಯಾರ್ಥಿ ಸಾವು


    ಭದ್ರಾವತಿ, ಏ. ೧೫: ಕಾಲುವೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ.
    ಮೃತಪಟ್ಟ ವಿದ್ಯಾರ್ಥಿಯನ್ನು ದೊಡ್ಡೇರಿ ಅಲ್ಪಸಂಖ್ಯಾತ ವಸತಿ ಶಾಲೆಯ ವಿದ್ಯಾರ್ಥಿ ಮಹಮದ್ ಅಲ್ಹನ್(೧೬) ಎಂದು ಗುರುತಿಸಲಾಗಿದೆ. ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಅಲ್ಹನ್ ಪರೀಕ್ಷೆ ಮುಗಿಸಿಕೊಂಡು ರಜೆ ಮೇಲೆ ಮನೆಗೆ ಹಿಂದಿರುಗುವಷ್ಟರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
    ವಿದ್ಯಾರ್ಥಿ ಅಲ್ಹನ್ ಶಿವಮೊಗ್ಗ ವಾದಿ-ಏ-ಹುದಾ ನಿವಾಸಿಯಾದ ಮಹಮದ್ ಹರೂನ್ ಪುತ್ರನಾಗಿದ್ದು, ಈತ ೬ನೇ ತರಗತಿಯಿಂದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪರೀಕ್ಷೆ ಮುಕ್ತಾಯಗೊಂಡ ಮರುದಿನ ಈತ ವಸತಿ ಶಾಲೆಯಿಂದ ಸ್ನೇಹಿತರೊಂದಿಗೆ ರಂಗನಾಥಪುರದ ಭದ್ರಾ ನದಿ ಕಾಲುವೆಯಲ್ಲಿ ಈಜಲು ತೆರಳಿದ್ದು, ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದಾನೆ. ೨ ದಿನಗಳ ಹಿಂದೆ ಈತನ ಮೃತ ದೇಹ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಪತ್ತೆಯಾಗಿದೆ.
    ರಜೆ ಹಿನ್ನಲೆಯಲ್ಲಿ ತಂದೆ ಹರೂನ್ ಪರೀಕ್ಷೆ ಮುಗಿದ ತಕ್ಷಣ ಮಗನನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment