ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ, ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಪ್ರಾರ್ಥನೆ
ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದಲ್ಲಿ ಮಾ.೨೨ ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರ ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್ ಸೇರಿದಂತೆ ಭಕ್ತರು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಬುಧವಾರ ನಡೆಯಲಿರುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಭದ್ರಾವತಿ, ಮಾ. ೨೧: ತಾಲೂಕಿನ ಮಾವಿನಕೆರೆ ಗ್ರಾಮದ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದಲ್ಲಿ ಮಾ.೨೨ ರಂದು ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ಹಾಗೂ ಭಕ್ತಿಯುತ ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೪ ವರ್ಷಗಳಿಂದ ನ್ಯೂಟೌನ್, ಹಳೇನಗರ, ಕಾಗದನಗರ ಹಾಗೂ ಕಾರೇಹಳ್ಳಿ ಧರ್ಮಕೇಂದ್ರದ ಭಕ್ತರು ಜೀವಂತ ಶಿಲುಬೆ ಹಾದಿಯ ಪ್ರದರ್ಶನ ತ್ಯಾಗ ಮತ್ತು ಭಕ್ತಿಯಿಂದ ನಡೆಸುತ್ತಿದ್ದಾರೆ.
೨ ಸಾವಿರ ವರ್ಷಗಳ ಹಿಂದಿನ ದಿನಗಳಲ್ಲಿ ಯೇಸುವಿನ ಪಾಡು, ಯಾತನೆ ಹಾಗೂ ಮರಣವನ್ನು ಅಭಿನಯದಿಂದ ಮರುಕಳುಹಿಸುವುದೇ ಜೀವಂತ ಶಿಲುಬೆಯ ಹಾದಿಯಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸುಮಾರು ೨ ಗಂಟೆವರೆಗೆ ಪ್ರದರ್ಶನ ನಡೆಯಲಿದ್ದು, ನೈಜತೆ ಅನಾವರಣಗೊಳ್ಳಲಿದೆ ಎಂದರು.
೧೨ ಗಂಟೆಗೆ ದಿವ್ಯ ಬಲಿಪೂಜೆ. ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಕಾರ್ಯ ನೆರವೇರಲಿದೆ. ತಾಲೂಕಿನ ವಿವಿಧ ಕ್ರೈಸ್ತ ದೇವಾಲಯಗಳ ೨ ಸಾವಿರಕ್ಕೂ
ಹೆಚ್ಚು ಭಕ್ತರು ಶಿಲುಬೆ ಬೆಟ್ಟದ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಮಾತನಾಡಿ, ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೀವಂತ ಶಿಲುಬೆ ಹಾದಿಯ ಪ್ರದರ್ಶನ ಭಕ್ತರಲ್ಲಿ ಒಂದು ಅದ್ಭುತ ಶಕ್ತಿ, ಚೈತನ್ಯ ತಂದು ಕೊಡಲಿದೆ. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಈ ಬಾರಿ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪುನರ್ ಆರಂಭ ಹಾಗೂ ಅಭಿವೃದ್ಧಿ ಕುರಿತು, ದೇಶದಲ್ಲಿರುವ ಎಲ್ಲರ ಏಳಿಗೆಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ೮೯೭೧೭೦೯೨೮೧ಕ್ಕೆ ಸಂಪರ್ಕಿಸಬಹುದಾಗಿದೆ ಎಂದರು. ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಧರ್ಮಗುರು ಪಾದರ್ ಲಾನ್ಸಿ ಡಿಸೋಜಾ ಮಾತನಾಡಿ, ನಾವು ಸೇವಿಸುವ ಆಹಾರ ಯಾವುದಾದರೂ ಇರಲಿ ಉತ್ತಮ ದೇಹ, ಪರಿಶುದ್ಧ ಮನಸ್ಸು, ಭಾವನೆಗಳನ್ನು ಹೊಂದುವ ನಿಟ್ಟಿನಲ್ಲಿ ಅನುಸರಿಸುವ ಆಚರಣೆಗಳಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಗಾಂಧಿನಗರ ವೇಲಾಂಗಣಿ ಮಾತೆ ದೇವಾಲಯಗಳ ಧರ್ಮಗುರು ಪಾದರ್ ಸ್ಟೀವನ್ ಡೇಸಾ ಮಾತನಾಡಿ, ಬಲಿಪೂಜೆ ಮಹತ್ವ ಹಾಗು ಕ್ರೈಸ್ತ ಧರ್ಮದ ಆಚರಣೆಯಲ್ಲಿ ಅನುಸರಿಸುವ ಕ್ರಮಗಳನ್ನು ವಿವರಿಸಿದರು.
ಕಾಗದನಗರದ ಸಂತ ಜೋಸೆಫರ ದೇವಾಲಯ ಧರ್ಮಗುರು ಡೊನೆಮಿಕ್ ಕ್ರಿಸ್ತರಾಜ್, ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕ ಪಾದರ್ ಆರೋಗ್ಯ ರಾಜ್, ಪ್ರಮುಖರಾದ ದೇವಾಲಯದ ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ಡಿಕಾಸ್ಟ, ಸೆಲ್ವರಾಜ್, ಡೇವಿಸ್, ನಗರಸಭಾ ಸದಸ್ಯ ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment