Saturday, January 28, 2023

೧೦ ದಿನ ಪೂರೈಸಿದ ಗುತ್ತಿಗೆ ಕಾರ್ಮಿಕರ ಹೋರಾಟ : ಪಡಿತರ ವಿತರಕರ ಬೆಂಬಲ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೧೦ ದಿನ ಪೂರೈಸಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿತು.
    ಭದ್ರಾವತಿ, ಜ. ೨೮: ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೧೦ ದಿನ ಪೂರೈಸಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿತು.
    ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಹೋರಾಟಕ್ಕೆ ಸಂಘ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ಯಾವುದೇ ರೀತಿಯ ಹೋರಾಟಕ್ಕೂ ಸಿದ್ದವಿದೆ. ಸರ್ಕಾರ ತಕ್ಷಣ ಮುಚ್ಚುವ ಆದೇಶ ಹಿಂಪಡೆಯಬೇಕು. ಅಗತ್ಯವಿರುವ ಬಂಡವಾಳ ತೊಡಗಿಸಬೇಕೆಂದು ಆಗ್ರಹಿಸಿದರು.
ಸಂಘದ ನಿರ್ದೇಶಕ, ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ನಮ್ಮದು ಪಕ್ಷಾತೀತ ಹೋರಾಟವಾಗಬೇಕು. ರಾಜಕೀಯ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು. ಕಾರ್ಮಿಕ ವಿರೋಧಿ ನೀತಿ ಅನುಸರಿಸುವ ಯಾವುದೇ ಸರ್ಕಾರವಿರಲಿ ಅದರ ವಿರುದ್ಧ ಜನರು ಹೋರಾಟಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಹೋರಾಟಕ್ಕೆ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
    ಸಂಘದ ಪ್ರಮುಖರಾದ ಜಿಲ್ಲಾ ಕಾರ್ಯದರ್ಶಿ ಜವರಾಯಿ, ನಿರ್ದೇಶಕ ವಾಗೀಶ್, ನಾಗರತ್ನ, ಸಚ್ಚಿದಾನಂದ ಗುಪ್ತ, ಉಮೇಶ್, ಪ್ರಕಾಶ್, ಎಸ್.ಕೆ ಸುಧೀಂದ್ರ, ಎಎಪಿ ಎಚ್. ರವಿಕುಮಾರ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪಂಜಿನ ಮೆರವಣಿಗೆ :
    ಕಾರ್ಖಾನೆ ಮುಂಭಾಗ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಶುಕ್ರವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
    ಹೋರಾಟ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ವಿಐಎಸ್‌ಎಲ್ ಡಬ್ಬಲ್ ರಸ್ತೆಯಲ್ಲಿ ಸಾಗಿ ಹೊಸಸೇತುವೆ ರಸ್ತೆ ಮೂಲಕ ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮೂಲಕ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಲ್ಲಿ ಅಂತ್ಯಗೊಂಡಿತು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಗುತ್ತಿಗೆ ಕಾರ್ಮಿಕರು ಹಾಗು ಮಹಿಳೆಯರು ಪಾಲ್ಗೊಂಡಿದ್ದರು.


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಂಭಾಗ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಶುಕ್ರವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


No comments:

Post a Comment