ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ನಗರದ ಬಿ.ಎಚ್ ರಸ್ತೆ ಕಿತ್ತೂರು ಚೆನ್ನಮ್ಮ ವಾಣಿಜ್ಯ ಮಳಿಗೆಗಳ ಚಪ್ಪಲಿ ಅಂಗಡಿಯಲ್ಲಿ ಭಾನುವಾರ ಮಧ್ಯ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಭದ್ರಾವತಿ, ಫೆ. ೨೧: ನಗರಸಭೆ ವಾರ್ಡ್ ನಂ.೩ರ ನಗರದ ಬಿ.ಎಚ್ ರಸ್ತೆ ಕಿತ್ತೂರು ಚೆನ್ನಮ್ಮ ವಾಣಿಜ್ಯ ಮಳಿಗೆಗಳ ಚಪ್ಪಲಿ ಅಂಗಡಿಯಲ್ಲಿ ಭಾನುವಾರ ಮಧ್ಯ ರಾತ್ರಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ನಡೆದಿದೆ.
ಮಧ್ಯ ರಾತ್ರಿ ಸುಮಾರು ೨ ಗಂಟೆ ಸಮಯ ಬೆಂಕಿ ಕಾಣಿಸಿಕೊಂಡಿರುವುದು ತಿಳಿದು ಬಂದಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಗಳು ಬೆಳಿಗ್ಗೆ ೪ ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಎ. ಸುಬ್ರಮಣ್ಯ, ಪಿ. ಮಂಜುನಾಥ್, ಎಂ. ವಿನೂತನ್, ಎಂ.ಸಿ ಮಹೇಂದ್ರ ಮತ್ತು ಎಚ್.ಎಂ ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಸುಮಾರು ೨ ರಿಂದ ೩ ಲಕ್ಷ ರು. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಆರ್ಥಿಕ ನೆರವಿನ ಭರವಸೆ :
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಾರ್ಡಿನ ನಗರಸಭಾ ಸದಸ್ಯ ಜಾರ್ಜ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಅಂಗಡಿ ಮಾಲೀಕರಿಂದ ಘಟನೆ ಕುರಿತು ಮಾಹಿತಿ ಪಡೆದು ಸೂಕ್ತ ಪರಿಹಾರ ಕೊಡಿಸುವಂತೆ ಶಾಸಕರಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಭದ್ರಾವತಿ ಬಿ.ಎಚ್ ರಸ್ತೆಯ ವಾಣಿಜ್ಯ ಮಳಿಗೆಗಳ ಚಪ್ಪಲಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಾನಿಗೊಳಗಾದ ಸ್ಥಳಕ್ಕೆ ವಾರ್ಡ್ ನಗರಸಭೆ ಸದಸ್ಯೆ ಜಾರ್ಜ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
No comments:
Post a Comment