Sunday, August 22, 2021

ರಾಷ್ಟ್ರೀಯ ನಾಯಕರ ಚಿಂತನೆ, ಆದರ್ಶಗಳು ಒಂದು ಪಕ್ಷಕ್ಕೆ ಸೀಮಿತವಾಗಬಾರದು

ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
    ಭದ್ರಾವತಿ : ಉದಾತ್ತ ಮತ್ತು ಒಳ್ಳೆಯ ಚಿಂತನೆಗಳು ಯಾವ ಮೂಲದಿಂದ ಬಂದರೂ ಸಹ ಅದನ್ನು ಸ್ವೀಕರಿಸುವುದೇ ಭಾರತೀಯತೆ. ಇದು ಭಾರತೀಯರ ಉದಾತ್ತ ಗುಣ ಎಂಬುದನ್ನು ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಅವರು ತೋರಿಸಿಕೊಟ್ಟಿದ್ದರು ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
    ಅವರು ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
    ಏಕತೆ ಮತ್ತು ಸಮಗ್ರತೆಗೆ ವಿಶೇಷ ಒತ್ತುನೀಡಿ ಮಾದರಿ ಆಡಳಿತ ನೀಡುವ ಜೊತೆಗೆ ರಾಷ್ಟ್ರೀಯ ನಾಯಕರ ಚಿಂತನೆ ಮತ್ತು ಆದರ್ಶಗಳು ಒಂದು ಪಕ್ಷಕ್ಕೆ ಸೀಮಿತವಾಗಿರಬಾರದು ಎಂಬುದನ್ನು ತೋರಿಸಿಕೊಟ್ಟಿದ್ದರು.
    ಡಿಜಿಟಲ್ ತಂತ್ರಜ್ಞಾನದತ್ತ ಯುವಕರನ್ನು ಆಕರ್ಷಿಸುವಲ್ಲಿ ಕಾರಣಕರ್ತರಾಗುವ ಜೊತೆಗೆ ಅಲ್ಪ ಕಾಲದಲ್ಲಿಯೇ ಎಲ್ಲಾ ನಾಯಕರನ್ನು ಆಕರ್ಷಿಸಿ ದೇಶಕ್ಕೆ ತಾಂತ್ರಿಕ ಸ್ಪರ್ಶನೀಡಿದ ಅಪರೂಪದ ರಾಜಕೀಯ ಮುತ್ಸದ್ದಿ ಯಾಗಿದ್ದರು. ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯ ಕನಸ ಬಿತ್ತಿದ್ದರು. ಇಂತಹ ಮಹಾನ್ ಪುರುಷರ ಆದರ್ಶಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
    ರೋವರ‍್ಸ್ ಮತ್ತು ರೇಜರ‍್ಸ್ ಸಂಚಾಲಕ ಕೆ.ಬಿ ರೇವಣ ಸಿದ್ದಪ್ಪ, ಉಪನ್ಯಾಸಕ ಡಾ. ತಿಪ್ಪೇಶ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment