Sunday, December 18, 2022

ಕರ್ನಾಟಕ ಒನ್ ಕೇಂದ್ರದಿಂದ ಹೆಚ್ಚಿನ ಅನುಕೂಲ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಕಛೇರಿ ರಸ್ತೆ, ಡಿಸಿಸಿ ಬ್ಯಾಂಕ್ ಸಮೀಪ ನೂತನವಾಗಿ ಕಾರ್ಯಾರಂಭಗೊಂಡಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.  
    ಭದ್ರಾವತಿ, ಡಿ. ೧೮ : ತಾಲೂಕು ಮಟ್ಟದಲ್ಲೂ ಕರ್ನಾಟಕ ಒನ್ ಕೇಂದ್ರಗಳ ಕಾರ್ಯಾರಂಭದಿಂದಾಗಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಮಯ ಹಾಗು ಹಣ ಉಳಿತಾಯದ ಜೊತೆಗೆ ಸರ್ಕಾರಿ ಕಛೇರಿಗಳನ್ನು ಅಲೆಯುವುದು ತಪ್ಪಿದಂತಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ತಾಲೂಕು ಕಛೇರಿ ರಸ್ತೆ, ಡಿಸಿಸಿ ಬ್ಯಾಂಕ್ ಸಮೀಪ ನೂತನವಾಗಿ ಕಾರ್ಯಾರಂಭಗೊಂಡಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
      ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ಒನ್ ಕೇಂದ್ರಗಳು ಸಹಕಾರಿಯಾಗಿವೆ. ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಸೌಲಭ್ಯಗಳು ಶೀಘ್ರವಾಗಿ, ಸುಲಭವಾಗಿ ತಲುಪುವಂತಾಗಿವೆ ಎಂದರು.
    ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ನಗರದ ಜನರಿಗೆ ಸಮಗ್ರ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಕೇಂದ್ರ ಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಕೇಂದ್ರಗಳು ಗ್ರಾಮ ಒನ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.
      ಹಳೇನಗರ ಪೋಲಿಸ್ ಠಾಣಾಧಿಕಾರಿ ಕವಿತಾ, ಉದ್ಯಮಿ ಬಿ.ಕೆ ಜಗನ್ನಾಥ್, ಸಂಚಾಲಕರಾದ ಮಹಜರ್‌ಖಾನ್, ಲಕ್ಷ್ಮಿದೇವಿ, ಮೊಹಮ್ಮದ್ ಏಜಾಜ್ ಖಾನ್, ಸಂತೋಷ್, ಎಸ್.ಎನ್ ಶಿವಪ್ಪ ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment