Sunday, April 4, 2021

ಸರ್ಕಾರದ ಯಾವುದೇ ಅನುದಾನವಿಲ್ಲದೆ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ

೫ ಕೆರೆಗಳ ಹೂಳು ತೆಗೆಯುವ ಕಾರ್ಯ ಪೂರ್ಣ :  ಪೌರಾಯುಕ್ತ ಮನೋಹರ್ ಖುದ್ದು ಪರಿಶೀಲನೆ


ಪೌರಾಯುಕ್ತ ಮನೋಹರ್ ಭಾನುವಾರ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ತಂಡದೊಂದಿಗೆ ಖುದ್ದಾಗಿ ಭೇಟಿ ನೀಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. 
   ಭದ್ರಾವತಿ, ಏ. ೪: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಹೇಗಾದರೂ ಮಾಡಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದೊಂದಿಗೆ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಬಹುತೇಕ ಯಶಸ್ವಿ ದಾರಿಯಲ್ಲಿ ಸಾಗುತ್ತಿದೆ.
     ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಸಂಬಂಧ ನಗರಸಭೆಗೆ ಹಲವಾರು ಬಾರಿ ಮನವಿ ಸಹ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೭೦ ಕೆರೆಗಳ ಪೈಕಿ ಪ್ರಸ್ತುತ ೧೮ ಕೆರೆಗಳ ಬೌಂಡರಿ ನಿಗದಿಪಡಿಸುವ ಜೊತೆಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
       ಸರ್ಕಾರದ ನೆರವಿಲ್ಲದೆ ಹೂಳು ತೆಗೆಯುವ ಕಾರ್ಯಾಚರಣೆ:
     ಗ್ರಾಮಾಂತರ ಭಾಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ರು. ಹಣ ವ್ಯಯ ಮಾಡಿ  ಹೂಳುವ ತೆಗೆಯುವ ಮೂಲಕ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಸರ್ಕಾರದ ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪೌರಾಯುಕ್ತರ ತಂಡ ಮುಂದಾಗಿದೆ.
     ವಿವಿಧ ಸಂಘಟನೆಗಳ ಸಹಕಾರೊಂದಿಗೆ, ಸ್ವಯಂ ಸೇವಕರು, ಸ್ಥಳೀಯ ರೈತರು ಹಾಗು ದಾನಿಗಳ ನೆರವಿನೊಂದಿಗೆ ಲಕ್ಷಾಂತರ ರು. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಇದುವರೆಗೂ ೧೮ ಕೆರೆಗಳ ಪೈಕಿ ಸಿದ್ದಾಪುರದ ಗೌಡನ ಕಟ್ಟೆ ಕೆರೆ, ಚಿಕ್ಕಯ್ಯನ ಕೆರೆ, ಹೊಸೂರು ಕೆರೆ, ಬುಳ್ಳಾಪುರ ಚಿಕ್ಕಯ್ಯನ ಕೆರೆ ಮತ್ತು ಬಾಳೆಕಟ್ಟೆ ಕೆರೆ ಒಟ್ಟ ೫ ಕೆರೆಗಳ ಹೂಳು ತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
      ಪೌರಾಯುಕ್ತರಿಂದ ಖುದ್ದು ಪರಿಶೀಲನೆ :
    ಪೌರಾಯುಕ್ತ ಮನೋಹರ್ ಭಾನುವಾರ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ತಂಡದೊಂದಿಗೆ ಖುದ್ದಾಗಿ ಭೇಟಿ ನೀಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳೀಯ ರೈತರು, ಮುಖಂಡರು ಹಾಗು ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿದರು.
    ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಪ್ರಮುಖರಾದ ಆರ್. ವೇಣುಗೋಪಾಲ್, ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ಶಶಿಕಲಾ ವಿಶ್ವನಾಥ್, ಮುರುಗನ್, ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ರೈತ ಮುಖಂಡರಾದ ಸತೀಶ್, ಕಂಠಪ್ಪ, ಬಸವರಾಜ್, ಚಂದ್ರಪ್ಪ, ಇಂದ್ರಣ್ಣ, ಮುರುಗಣ್ಣ, ನಾಸೀರ್, ನಾಗಣ್ಣ, ಜಗದೀಶ್ ಹಾಗು ನಗರಸಭೆ ಸೂಪರ್‌ವೈಸರ್ ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment