Sunday, June 14, 2020

ಪುನಃ ಹೆಚ್ಚಾದ ಬೀದಿ ನಾಯಿಗಳ ಹಾವಳಿ : ೭ ಕುರಿ ಬಲಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ೫-೬ ನಾಯಿಗಳು ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದ್ದು, ೭ ಕುರಿಗಳು ಮೃತಪಟ್ಟಿದ್ದು, ೪ ಗಾಯಗೊಂಡಿವೆ. 
ಭದ್ರಾವತಿ, ಜೂ. ೧೪: ಕೆಲವು ತಿಂಗಳುಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಮಕ್ಕಳು, ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. 
ನಗರಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸುಮಾರು ೧೦-೧೫ ಬೀದಿ ನಾಯಿಗಳು ಒಂದೆಡೆ ಸೇರಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಬೆಳಗಿನ ಜಾವ, ರಾತ್ರಿ ವೇಳೆ ರಸ್ತೆ ಮಧ್ಯ ಭಾಗದಲ್ಲಿಯೇ ಗುಂಪು ಗುಂಪಾಗಿ ಚಲಿಸುತ್ತಿವೆ. ಇದರಿಂದ ಮಕ್ಕಳು, ಮಹಿಳೆಯರು ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಭಾನುವಾರ ಬೆಳಗಿನ ಸುಮಾರು ೫-೬ ಬೀದಿ ನಾಯಿಗಳು ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ೭ ಕುರಿಗಳು ಮೃತಪಟ್ಟಿವೆ. ೪ ಗಾಯಗೊಂಡಿವೆ. ಮೃತಪಟ್ಟ ಕುರಿಗಳನ್ನು ಜೆಸಿಬಿ ಮೂಲಕ ವಿಲೇವಾರಿ ಮಾಡಲಾಯಿತು. 
ಈ ಹಿಂದೆ ಸಹ ಇದೆ ರೀತಿಯ ಪ್ರಕರಣಗಳು ನಡೆದಿದ್ದು, ಅಲ್ಲದೆ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಸಂಚರಿಸುವ ಮಹಿಳೆಯರು, ಮಕ್ಕಳ ಮೇಲೂ ದಾಳಿ ನಡೆಸಿರುವ ಘಟನೆಗಳು ನಡೆದಿವೆ. ಈ ಹಿಂದೆ ನಗರಸಭೆ ಆಡಳಿತ ನಾಯಿಗಳನ್ನು ಹಿಡಿದು ನಿರ್ಜನ ಪ್ರದೇಶಗಳಿಗೆ ಬಿಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಹ ಕೈಗೊಂಡಿತ್ತು. ಇದರಿಂದಾಗಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಪುನಃ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ತಕ್ಷಣ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. 

No comments:

Post a Comment