Tuesday, March 14, 2023

ವಿಐಎಸ್‌ಎಲ್ ಉಳಿಸಿ : ಮೈಸೂರಿನಲ್ಲಿ ಧರಣಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಲು ಹಾಗು ಮೈಸೂರು ಅರಸರ ಮನೆತನಕ್ಕೆ ವಿಷಯ ಮುಟ್ಟಿಸಲು ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವ ನಗರದ ದಯಾನಂದ್ ಮತ್ತು ಸಂಗಡಿಗರು
    ಭದ್ರಾವತಿ, ಮಾ. ೧೪ : ನಗರದ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ವಿದ್ಯುನ್ಮಾನ ತೂಕ ಮತ್ತು ಅಳತೆ ತಕ್ಕಡಿಗಳ ಸಣ್ಣ ವ್ಯಾಪಾರಿ ದಯಾನಂದ್ ಮತ್ತು ಸ್ನೇಹಿತರು ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಮೈಸೂರಿನ ಗಾಂಧಿ ಸ್ಕ್ವಯರ್‌ನ ಗಾಂಧಿ ಪ್ರತಿಮೆ ಬಳಿ ರಾಜ ಮನೆತನದ ಗಮನ ಸೆಳೆದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಮಂಗಳವಾರ ಧರಣಿ ಪ್ರತಿಭಟನೆ ನಡೆಸಿದರು.
  ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೋಕ್ಷಗುಡಂ ವಿಶ್ವೇಶ್ವರಾಯರವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆಗೆ ನೂರು ವರ್ಷ ತುಂಬಿದೆ. ಲಕ್ಷಾಂತರ ಮಂದಿಗೆ ಉದ್ಯೋಗ, ಅನ್ನ, ವಸತಿ ನೀಡಿದ ಕಾರ್ಖಾನೆಯ ಶತಮಾನೋತ್ಸವ ಆಚರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಚ್ಚಲು ತೀರ್ಮಾನಿಸಿ ಶೋಕೋತ್ಸವ ಆಚರಿಸುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕಳೆದೆರೆಡು ತಿಂಗಳಿಂದ ಗುತ್ತಿಗೆ ಕಾರ್ಮಿಕರು ನಿರಂತರ ಹೋರಾಟ ಮಾಡುತ್ತಿದ್ದರು ಪ್ರಯೋಜನವಾಗಿಲ್ಲ. ನಾಡಿನ ಸಂತರು ಮಠಾಧಿಪತಿಗಳು ಸಂಘ ಸಂಸ್ಥೆಗಳ ಮುಖಂಡರು ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಧಾನಿಗಳು ವಿಮಾನ ನಿಲ್ದಾಣ ಉದ್ಘಾಟಿಸಲು ಶಿವಮೊಗ್ಗಕ್ಕೆ ಆಗಮಿಸಿದ್ದರೂ ಸಹ ಈ ಕುರಿತು ಚಕಾರ ಎತ್ತಿಲ್ಲ. ಮಂಡ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ ವಿಶ್ವೇಶ್ವರಾಯ ಇಬ್ಬರೂ ಕನ್ನಡ ನಾಡಿಗೆ ಸೀಮಿತರಲ್ಲ. ಜಗತ್ತಿಗೆ ಬೆಳಕು ಕೊಟ್ಟ ಅಭಿವೃದ್ದಿಯ ಹರಿಕಾರ ಮಹಾನ್ ವ್ಯಕ್ತಿಗಳೆಂದು ಸ್ವತಃ ಮೋದಿರವರೇ ಹೊಗಳಿ ರಾಜಕೀಯ ಭಾಷಣ ಮಾಡಿದ್ದಾರೆ. ಅವರಿಬ್ಬರ ಮೇಲೆ ಅಂತಹ ಅಭಿಮಾನವಿದ್ದರೆ ಅವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆ ಉಳಿಸಲಿ ಎಂದು ಆಗ್ರಹಿಸಿದರು.
    ಈಗಾಗಲೇ ಕಾರ್ಖಾನೆ ಉಳಿವಿಗಾಗಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಕಾರ್ಖಾನೆ ಸ್ಥಾಪನೆಗೆ ಕಾರಣಕರ್ತರಾಗಿರುವ ಮೈಸೂರು ಅರಸರ ಮನೆತನಕ್ಕೆ ವಿಷಯ ಮುಟ್ಟಿಸಲು ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಪ್ರತಿಭಟಣಾ ಧರಣಿ ಕೈಗೊಳ್ಳಲಾಗಿದೆ ಎಂದರು.

No comments:

Post a Comment