ನ್ಯೂಟೌನ್ ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳುವ ಭರವಸೆ
ಭದ್ರಾವತಿ ಗರದ ಬೈಪಾಸ್ ರಸ್ತೆಯ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಏಕಾಏಕಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೆ ಗಾಂಜಾ ಅಮಲು ಕಾರಣವಾಗಿದೆ. ತಕ್ಷಣ ಹಲ್ಲೆ ನಡೆಸಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಡಿ. ೧೨: ನಗರದ ಬೈಪಾಸ್ ರಸ್ತೆಯ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಏಕಾಏಕಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಳೇನಂಜಾಪುರ ಗ್ರಾಮದ ನಿವಾಸಿಗಳಾದ ವಿನೋದ್ ಮತ್ತು ರಾಜೇಶ್ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಈ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಮತ್ತು ರಾಜೇಶ್ ಹೊಸಸಿದ್ದಾಪುರದ ಕಟಿಂಗ್‌ಶಾಪ್ ಬಳಿ ನಿಂತುಕೊಂಡಿದ್ದಾಗ ಯುವಕರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಹಲ್ಲೆ ತಪ್ಪಿಸಲು ಹೋದ ನಗರಸಭಾ ಮಾಜಿ ಸದಸ್ಯ ಅನಿಲ್‌ಕುಮಾರ್‌ರವರ ತಂದೆಯ ಮೇಲೆ ಸಹ ಹಲ್ಲೆ ನಡೆಸಲಾಗಿದೆ. ಗಾಂಜಾ ಅಮಲಿನಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ರಸ್ತೆ ತಡೆ ನಡೆಸಿ ಪ್ರತಿಭಟನೆ :
ಈ ಭಾಗದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ. ಇದನ್ನು ಪ್ರಶ್ನಿಸಲು ಮುಂದಾದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತಿದೆ. ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರು ಪ್ರತಿ ದಿನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಸ್ಥಳೀಯರು ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯೂಟೌನ್ ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
No comments:
Post a Comment