ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕಕ್ಕೆ ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಚಾಲನೆ ನೀಡಿದರು.
ಭದ್ರಾವತಿ, ಡಿ. ೧೨: ಬೀದಿನಾಟಕಗಳ ಮೂಲಕ ಜನರನ್ನು ಆಕರ್ಷಿಸುವುದು ಸವಾಲಿನ ಕೆಲಸವಾಗಿದ್ದು, ಅನುಭವಿ ಕಲಾವಿದರಿಂದ ಮಾತ್ರ ಬೀದಿ ನಾಟಕಗಳನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ಅವರು ಭಾನುವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಭಿನ್ನ ಮನಸ್ಥಿತಿಯ ಜನರ ಗಮನವನ್ನು ಒಂದೆಡೆ ಸೆಳೆದು ಆ ನಂತರ ನಾಟಕದಲ್ಲಿನ ವಿಚಾರಧಾರೆಗಳನ್ನು ತಿಳಿಸುವ ಕೆಲಸ ನಿಜಕ್ಕೂ ಸವಾಲಾಗಿದೆ. ಬೀದಿ ನಾಟಕಗಳು ತನ್ನದೇ ವಿಶಿಷ್ಟತೆಯನ್ನು ಹೊಂದಿವೆ. ಬೀದಿ ನಾಟಕಗಳು ಜನರನ್ನು ಹೋರಾಟಗಳಲ್ಲಿ, ಚಳುವಳಿಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಜೊತೆಗೆ ಸಾಮಾಜಿಕ ಕಾಳಜಿ, ಜಾಗೃತಿ ಮೂಡಿಸಲು ಸಹಕಾರಿಯಾಗಿವೆ. ಇಂತಹ ಬೀದಿ ನಾಟಕಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಬೀದಿ ನಾಟಕ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕೆಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ರಚನೆ, ನಿರ್ದೇಶನದ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕ ಪ್ರದರ್ಶನ ಅಪರಂಜಿ ಅಭಿನಯ ಶಾಲೆಯ ಕಲಾವಿದರು ನಡೆಸಿಕೊಟ್ಟರು.
No comments:
Post a Comment