ಮಂಗಳವಾರ, ಸೆಪ್ಟೆಂಬರ್ 30, 2025

ಮೇದ ಜನಾಂಗದ ಕೌಲಶ್ಯ ಅಭಿವೃದ್ಧಿಗಾಗಿ ಕರಕುಶಲ ವಸ್ತುಗಳ ತರಬೇತಿ ಶಿಬಿರ : ಜಿ. ಪಲ್ಲವಿ

ಶಿವಮೊಗ್ಗ ಜಿಲ್ಲಾ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿಗಳ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಜಿಲ್ಲಾಧ್ಯಕ್ಷ  ರಾಜಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಮೇದ ಜನಾಂಗದವರ ಏಳಿಗೆಗೆ ಬದ್ಧವಾಗಿದ್ದು, ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಅನುಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿಗಾಗಿ ಬಿದಿರು ಬುಟ್ಟಿ ತಯಾರಿಕೆ ಸೇರಿದಂತೆ ಕರಕುಶಲ ವಸ್ತುಗಳ ತರಬೇತಿ ಶಿಬಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿಗಳ ನಿಗಮದ ವತಿಯಿಂದ ಆಯೋಜಿಸಲಾಗುವುದು ಎಂದು ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು. 
    ಅವರು ಶಿವಮೊಗ್ಗ ಜಿಲ್ಲಾ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮೇದ ಜನಾಂಗದವರು ಇಂದಿಗೂ ತಮ್ಮ ಮೂಲ ಕಸುಬು ಮುಂದುವರೆಸಿಕೊಂಡು ಬರುತ್ತಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಜನಾಂಗ ಹೆಚ್ಚು ಅಭಿವೃದ್ಧಿ ಹೊಂದಬೇಕಾಗಿದೆ ಎಂದರು. 
    ಶಿವಶರಣ ಮೇದಾರ ಕೇತೇಶ್ವರರ ಜಯಂತಿ ಸರ್ಕಾರದಿಂದ ಆಚರಿಸುವ ಮೂಲಕ ಆ ದಿನ ಸರ್ಕಾರಿ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. 
    ಹಿಂದುಳಿದ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜನಾಂಗದವರು ಸೂಕ್ತ ಮಾಹಿತಿ ನೀಡುವ ಮೂಲಕ ಧರ್ಮ-ಹಿಂದೂ, ಜಾತಿ-ಮೇದ(ಎಸ್.ಟಿ ಸಿ-೩೭.೧) ಎಂದು ಬರೆಸುವುದು ಅಥವಾ ಸಮಾನಾರ್ಥಕ ಪದಗಳಾದ ಮೇದಾರಿ(ಎಸ್.ಟಿ ಸಿ-೩೭.೨), ಗೌರಿಗ(ಎಸ್.ಟಿ ಸಿ-೩೭.೩), ಬುರುಡ(ಎಸ್.ಟಿ ಸಿ-೩೭.೪) ಮತ್ತು ಮೇದಾರ(ಎಸ್.ಟಿ ಸಿ-೩೭.೫) ಎಂದು ದಾಖಲಿಸುವಂತೆ ಸೂಚಿಸಲಾಯಿತು. 
    ಜಿಲ್ಲಾಧ್ಯಕ್ಷ ಆಯನೂರು ರಾಜಣ್ಣ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಬಿ. ಶಂಕರ್, ಖಜಾಂಚಿ ಮಲ್ಲೇಶ್, ಶಿವಮೊಗ್ಗ ಜಿಲ್ಲಾ ಮೇದಾರ ಅಲೆಮಾರಿ ಡಿಸಿ ಕಮಿಟಿ ಸದಸ್ಯ ಕೂಡ್ಲಿಗೆರೆ ಎಸ್. ಮಹಾದೇವ,  ಅಲೆಮಾರಿ ಸಂಘಟನೆಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಿ.ಎಸ್ ಆನಂದಕುಮಾರ್ ಏಕವಲ್ಯ, sಸೊರಬ ರವಿ, ಶಿಕಾರಿಪುರ ಲಕ್ಷ್ಮಣ್ಣಪ್ಪ, ವೀರಭದ್ರಪ್ಪ, ಬಾರಂದೂರು ಸೋಮಣ್ಣ, ಶಿವಮೊಗ್ಗ ಸೀಮೆಎಣ್ಣೆ ರಾಮಣ್ಣ, ಭದ್ರಾವತಿ ಎಚ್. ವಿಶ್ವನಾಥ್, ರಮೇಶ್, ಚಿಕ್ಕಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ