ಭದ್ರಾವತಿ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪಿಡಿಓ ಮಹಮದ್ ಆಲಿ
ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಓ) ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಆರೋಪದ ಅಡಿ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿನ ಸರ್ವೆ ನಂಬರ್ ೧೪೪ರ ೩೦*೪೦ ಖಾಲಿ ಜಾಗದ ಚಕ್ಕು ಬಂದಿ ನಿಗದಿಪಡಿಸುವಂತೆ ಕೋರಿ ಶಾಲಾವಾಹನ ಕೆಲಸ ಮಾಡಿಕೊಂಡಿದ್ದ ದಿನೇಶ್ ಎಂಬುವರು ಅರ್ಜಿ ಸಲ್ಲಿಸಿ ಇದನ್ನ ಇ-ಸ್ವತ್ತು ಮಾಡಿಕೊಡಲು ಕೋರಿದ್ದರು.
ಈ ಕೆಲಸಕ್ಕೆ ಪ್ರಭಾರ ಪಿಡಿಓ ಮಹಮದ್ ಆಲಿ ಮತ್ತು ಕಾರ್ಯದರ್ಶಿ ಪಿ.ಎಚ್ ಸುರೇಶ್ ೩೦ ಸಾವಿರ ರು. ಬೇಡಿಕೆ ಇಟ್ಟಿದ್ದರು. ದಿನೇಶ್ ಸಂಜೆ ೪.೧೫ರ ಸಮಯದಲ್ಲಿ ೧೫ ಸಾವಿರ ರು. ಹಣ ಗ್ರಾಮ ಪಂಚಾಯಿತಿ ಎದುರು ಲಂಚವಾಗಿ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇಬ್ವರನ್ನೂ ಲೋಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ತನಿಖೆ ಕೈಗೊಂಡಿರುತ್ತಾರೆ.
ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್ .ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ಉಪಾಧೀಕ್ಷಕ ಬಿ.ಪಿ ಚಂದ್ರಶೇಖರ್, ಪೊಲೀಸ್ ಠಾಣೆ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ, ಪೊಲೀಸ್ ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಬಿ.ಟಿ ಚೆನ್ನೇಶ್, ದೇವರಾಜ್, ಪ್ರಕಾಶ್ ಬಾರಿಮರದ, ಅಂಜಲಿ, ಚಂದ್ರಿಬಾಯಿ, ಗೋಪಿ ಮತ್ತು ಪ್ರದೀಪ್ ಪಾಲ್ಗೊಂಡಿದ್ದರು.
No comments:
Post a Comment