ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್‌ರವರು ಪದೋನ್ನತ್ತಿಹೊಂದಿ ಉಡುಪಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಬುಧವಾರ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಮಾ. ೩೧: ಸರ್ಕಾರಿ ಅಧಿಕಾರಿಗಳು, ನೌಕರರು ಬಹಳ ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ತಮ್ಮದಲ್ಲದ ತಪ್ಪುಗಳಿಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಗೆ ಎಡೆ ಮಾಡಿಕೊಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಹಳಷ್ಟು ಸಮಯದಲ್ಲಿ ಅಧಿಕಾರಿಗಳು ಮತ್ತು ನೌಕರರು ಬಲಿಪಶುಗಳಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕೆಂದರು.
ಕನ್ನಡದಲ್ಲಿ ಸ್ನಾತಕೋತ್ತರ ಪರೀಕ್ಷೆ ಬರೆದು ಉತ್ತೀರ್ಣಗೊಂಡ ನಂತರ ಹಲವಾರು ಬಾರಿ ಕೆಪಿಎಸ್‌ಸಿ ಪರೀಕ್ಷೆ ಎದುರಿಸಿ ಕೊನೆಯ ಹಂತದಲ್ಲಿ ಆಯ್ಕೆಯಾದಾಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹುದ್ದೆ ಲಭಿಸಿತು. ಆ ನಂತರ ಈ ಇಲಾಖೆಯ ಕಾರ್ಯ ಚಟುವಟಿಕೆಗಳು ತಿಳಿಯಿತು. ಅಲ್ಲಿಯವರೆಗೂ ಇಲಾಖೆ ಕುರಿತು ಯಾವುದೇ ರೀತಿ ಮಾಹಿತಿ ಇರಲ್ಲಿಲ್ಲ ಎಂದು ಕರ್ತವ್ಯಕ್ಕೆ ಸೇರ್ಪಡೆಗೊಳ್ಳುವ ಮೊದಲಿನ ಘಟನೆಗಳನ್ನು ನೆನಪು ಮಾಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆ ಇತರೆ ಇಲಾಖೆಗಳಿಗಿಂತ ವಿಭಿನ್ನವಾಗಿದೆ. ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಅನಾಹುತಗಳು ತಪ್ಪಿದ್ದಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುವ ಮೊದಲು ಭದ್ರಾವತಿ ಕುರಿತು ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿದ್ದವು. ಆದರೆ ವಾಸ್ತವ್ಯವಾಗಿ ಇಲ್ಲಿನ ಜನರು ಬಹಳಷ್ಟು ಮಾನವೀಯತೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ೫ ವರ್ಷಗಳಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು.
ವ್ಯವಸ್ಥಾಪಕ ಎನ್. ಕೃಷ್ಣಪ್ಪ ಮಾತನಾಡಿ, ದೂದ್‌ಪೀರ್‌ರವರು ಓರ್ವ ಪ್ರಾಮಾಣಿಕತೆ, ಮಾನವೀಯತೆಯುಳ್ಳ ಅಧಿಕಾರಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ, ಗೌರವದಿಂದ ಕಾಣುವಂತಾಗಿದೆ. ಅವರು ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ನಿರೀಕ್ಷಿಸಲಾರದಷ್ಟು ಮಟ್ಟಿಕ್ಕೆ ಇಲಾಖೆಯ ಚಿತ್ರಣವೇ ಬದಲಾಗಿದೆ. ಸ್ವಂತ ಕಟ್ಟಡದೊಂದಿಗೆ ಕಛೇರಿ, ಅಂಬೇಡ್ಕರ್ ಭವನ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ನಡೆದಿವೆ. ಈ ಹಿನ್ನಲೆಯಲ್ಲಿ ಅವರು ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಪದೋನ್ನತ್ತಿ ಹೊಂದಿರುವುದು ಸಂತೋಷದ ವಿಷಯವಾಗಿದೆ. ಇನ್ನೂ ಉನ್ನತ ಸ್ಥಾನಕ್ಕೇರುವ ಮೂಲಕ ಉತ್ತಮ ಭವಿಷ್ಯ ಹೊಂದಲಿ ಎಂದು ಹಾರೈಸಿದರು.
ಪ್ರಮುಖರಾದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಡಿಎಸ್‌ಎಸ್ ತಾಲೂಕು ಸಂಚಾಲಕ ರಂಗನಾಥ್, ಶಿಕ್ಷಕರಾದ ಜುಂಜ್ಯಾನಾಯ್ಕ, ಸಿ. ಜಯಪ್ಪ ಹಾಗು ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
No comments:
Post a Comment