Thursday, April 1, 2021

ವೀರಶೈವ ಸಮುದಾಯಗಳೆಲ್ಲ ಒಗ್ಗೂಡುವ ಮೂಲಕ ಬಲಿಷ್ಠತೆ ಕಾಯ್ದುಕೊಳ್ಳಲಿ : ಬಿ.ಕೆ ಸಂಗಮೇಶ್ವರ್

ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನಡೆದಾಡುವ ದೇವರು ತ್ರಿವಿದ ದಾಸೋಹಿ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಯವರ ೧೧೪ನೇ ಜನ್ಮದಿನ ಹಾಗು ಧಾರ್ಮಿಕ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
  ಭದ್ರವತಿ, ಏ. ೧: ವೀರಶೈವ ಸಮುದಾಯಗಳೆಲ್ಲ ಒಗ್ಗೂಡುವ ಮೂಲಕ ಬಲಿಷ್ಠತೆ ಕಾಯ್ದುಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
   ಅವರು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನಡೆದಾಡುವ ದೇವರು ತ್ರಿವಿದ ದಾಸೋಹಿ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಯವರ ೧೧೪ನೇ ಜನ್ಮದಿನ ಹಾಗು ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
   ಸಮುದಾಯಗಳು ಒಗ್ಗೂಡದೆ ಸಮಾಜಕ್ಕೆ ಯಾವುದೇ ರೀತಿ ಸಂದೇಶ ಸಾರಲು ಸಾಧ್ಯವಿಲ್ಲ. ನಮ್ಮ ಸಮುದಾಯಗಳೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಗುರುಗಳ ಸಮ್ಮುಖದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದರು.
    ಶ್ರೀ ಡಾ. ಶಿವಕುಮಾರ್ ಮಹಾಸ್ವಾಮೀಜಿಯವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ಆದರ್ಶಗುಣಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕೆಂದರು.
     ಅರಸೀಕೆರೆ ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶಿಕೇಂದ್ರಸ್ವಾಮೀಜಿ ಸಮ್ಮುಖದಲ್ಲಿ, ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠ, ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ಮಠ, ಯಡಿಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ ಅರುಣಾದೇವಿ, ಮಾಜಿ ಶಾಸಕ ಎಚ್.ಎಂ ಚಂದ್ರಶೇಖರಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
     ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್ ಸ್ವಾಗತಿಸಿದರು.
   ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಮತ್ತು ಯುವ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment