Monday, October 30, 2023

ಆಲೋಚನಾ, ವಿಚಾರ ಶಕ್ತಿ ಹೊಂದಿರುವ ನಾಯಕರ ಅಗತ್ಯವಿದೆ : ಎಚ್.ಆರ್ ಬಸವರಾಜಪ್ಪ

ಭದ್ರಾವತಿ ಶ್ರೀವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಜೆ.ಎಚ್ ಪಟೇಲ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌ಪಟೇಲರ ೯೩ನೇ ಜನ್ಮದಿನಾಚರಣೆ ಹಾಗು ಸಾವಯವ ರಾಜಕಾರಣ, ಚುನಾವಣೆ-ಸುಧಾರಣೆ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ: ರಾಜಕಾರಣದಲ್ಲಿ ಆಲೋಚನಾ ಶಕ್ತಿ, ವಿಚಾರಶಕ್ತಿ ಹೊಂದಿರುವ ನಾಯಕರ ಅಗತ್ಯವಿದೆ. ಆದರೆ ಇಂದು ಎಲ್ಲಾ ಪಕ್ಷಗಳಲ್ಲೂ ವ್ಯಾಪಾರಿ ಮನೋಭಾವ ಹೆಚ್ಚುತ್ತಿದೆ. ಹಣವಿದ್ದವರು ಪ್ರಬಲ, ಹಣವಿಲ್ಲದವರು ದುರ್ಬಲ ಎಂಬ ಮನೋಭಾವನೆ ಬೆಳೆದು ಬಿಟ್ಟಿದೆ. ಈ ರೀತಿಯ ಭಾವನೆ ಸರಿಯಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
    ನಗರದ ಶ್ರೀವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಜೆ.ಎಚ್ ಪಟೇಲ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌ಪಟೇಲರ ೯೩ನೇ ಜನ್ಮದಿನಾಚರಣೆ ಹಾಗು ಸಾವಯವ ರಾಜಕಾರಣ, ಚುನಾವಣೆ-ಸುಧಾರಣೆ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಣವೇ ಮೇಲುಗೈ ಸಾಧಿಸುತ್ತಿರುವ ಹೊಟ್ಟೆಪಾಡಿನ ರಾಜಕಾರಣದಿಂದ ರಾಜ್ಯ, ರಾಷ್ಟ್ರದ ಏಳಿಗೆ ಅಸಾಧ್ಯ. ೧೯೮೩ರ ಚುನಾವಣೆಯಲ್ಲಿ ನಾಯಕರುಗಳಿಗೆ ಹಣವಿಲ್ಲದಿದ್ದರೂ ಜನರೇ ಬಟ್ಟೆಹೊಲಿಸಿ, ಹಣನೀಡಿ ಚುನಾವಣೆಗೆ ನಿಲ್ಲಿಸುತ್ತಿದ್ದರು. ಆದರೆ ಇಂದು ಮತದಾರ ಹಣಪಡೆಯುವ ಮೂಲಕ ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ ಎಂದರು.
    ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಜೆ.ಎಚ್.ಪಟೇಲರು ಸಹ ಒಬ್ಬರಾಗಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಪಟೇಲರು ಎಂದಿಗೂ ರಾಜಕಾರಣ ಮಾಡಲಿಲ್ಲ. ಪ್ರಸ್ತುತ ರೈತ ನಾಯಕರು ವಿಧಾನಸಭೆ ಪ್ರವೇಶಿಸುವುದು ಅಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ನಾವುಗಳು ಅಧಿಕಾರಕ್ಕಾಗಿ ನೈತಿಕತೆ ಮೀರಿಲ್ಲ ಎಂದು ಹಳೆಯ ಘಟನೆಗಳನ್ನು ಸ್ಮರಿಸಿದರು.
    ಚಳುವಳಿಗಳಿಗೆ ರಾಜಕಾರಣ ಬದಲಿಸುವ ಶಕ್ತಿ ಇದೆ. ಈ ಹಿಂದಿನ ಚಳುವಳಿಗಳು ಇದಕ್ಕೆ ಉದಾಹರಣೆಯಾಗಿವೆ. ಚಳುವಳಿಯಿಂದಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ರಾಜಕಾರಣಕ್ಕೆ ಬರಬೇಕೆಂಬ ಪಟೇಲರ ನಿಲುವು ಸರಿಯಾಗಿದ್ದು, ಅವರ ರಾಜಕಾರಣ ಇಂದಿಗೂ ಮಾದರಿಯಾಗಿದೆ ಎಂದರು.
     ಜೆ.ಎಚ್ ಪಟೇಲರ ಪುತ್ರ, ಮಾಜಿ ಶಾಸಕ ಮಹಿಮ ಜೆ ಪಟೇಲ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ಎಲ್ ರವಿ, ಕಲ್ಪನ ಗೌಡ, ಆರ್.ಪಿ.ಯಶೋಧ, ಶಕುಂತಲ ಶೆಟ್ಟಿ, ಕರವೇ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ನಗರಸಭೆ ಸದಸ್ಯರಾದ ಆರ್. ಮೋಹನ್ ಕುಮಾರ್, ಜಾರ್ಜ್, ಮುಖಂಡರಾದ ಸಿದ್ದಲಿಂಗಯ್ಯ, ಡಿ.ಜೆ ಪ್ರಭು, ಮೋಸಸ್ ರೋಸಯ್ಯ, ಜಾನ್ ಬೆನ್ನಿ, ವೈ. ಶಶಿಕುಮಾರ್, ಯುವರಾಜ್, ಕಾರ್ಯಕ್ರಮದ ಆಯೋಜಕ ಹಾಗು ಜೆಡಿಯು ಮುಖಂಡ ಶಶಿಕುಮಾರ್ ಗೌಡ, ಬಾಬು ದೀಪಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Sunday, October 29, 2023

ಡಾ. ಪುನೀತ್ ರಾಜ್‌ಕುಮಾರ್ ೨ನೇ ವರ್ಷದ ಪುಣ್ಯಸ್ಮರಣೆ

ಕರ್ನಾಟಕ ರತ್ನ, ಪವರ್‌ಸ್ಟಾರ್ ಡಾ. ಪುನೀತ್‌ರಾಜ್‌ಕುಮಾರ್‌ರವರ ೨ನೇ ವರ್ಷದ ಪುಣ್ಯಸ್ಮರಣೆ ಭದ್ರಾವತಿ ನಗರದ ವಿವಿಧೆಡೆ ಅಭಿಮಾನಿಗಳಿಂದ ನಡೆಯಿತು.
    ಭದ್ರಾವತಿ : ಕರ್ನಾಟಕ ರತ್ನ, ಪವರ್‌ಸ್ಟಾರ್ ಡಾ. ಪುನೀತ್‌ರಾಜ್‌ಕುಮಾರ್‌ರವರ ೨ನೇ ವರ್ಷದ ಪುಣ್ಯಸ್ಮರಣೆ ನಗರದ ವಿವಿಧೆಡೆ ಅಭಿಮಾನಿಗಳಿಂದ ನಡೆಯಿತು.
    ತಾಲೂಕು ಕಛೇರಿ ರಸ್ತೆ, ನಿರ್ಮಲ ಆಸ್ಪತ್ರೆ ಸಮೀಪ ಶ್ರೀ ಕನಕ ಆಟೋ ನಿಲ್ದಾಣದಲ್ಲಿ ಈ ಬಾರಿ ಸಹ ಪುನೀತ್‌ರಾಜ್‌ಕುಮಾರ ಪುಣ್ಯಸ್ಮರಣೆ ಅದ್ದೂರಿಯಾಗಿ ಜರುಗಿತು. ಆಟೋ ಮಾಲೀಕರು, ಚಾಲಕರು, ಸ್ಥಳೀಯರು ಹಾಗು ಅಭಿಮಾನಿಗಳು ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ಮರಿಸಿದರು.
    ಸಂಘದ ಅಧ್ಯಕ್ಷ ಸುರೇಶ್ ನೇತೃತ್ವ ವಹಿಸಿದ್ದರು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
    ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾ ಡಾ. ರಾಜ್‌ಕುಮಾರ್ ಅಭಿಮಾನಿಗಳು, ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಗರಸಭೆ ಮಾರುಕಟ್ಟೆ ಸಮೀಪ ೨ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.
    ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಅಭಿಮಾನಿಗಳು, ನೃಪತುಂಗ ಆಟೋ ನಿಲ್ದಾಣದ ಆಟೋ ಮಾಲೀಕರು, ಚಾಲಕರು, ಸ್ಥಳೀಯ ವರ್ತಕರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಭಾರ ಎತ್ತುವ ಸ್ಪರ್ಧೆ : ಡಾ. ಎಸ್. ವರದರಾಜ್ ಚಿನ್ನದ ಪದಕ


 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಉಪನ್ಯಾಸಕ ಡಾ. ಎಸ್. ವರದರಾಜ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಉಪನ್ಯಾಸಕ ಡಾ. ಎಸ್. ವರದರಾಜ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಪುರುಷರ ವಿಭಾಗದ(೮೯ ಕೆ.ಜಿ) ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡು ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
    ವರದರಾಜ್‌ರವರು ಉಪನ್ಯಾಸಕ ವೃತ್ತಿಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಇವರಿಗೆ ಕ್ರೀಡಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ವಿಐಎಸ್‌ಎಲ್ ಶತಮಾನೋತ್ಸವ ವೇದಿಕೆ ನಿರ್ಮಾಣಕ್ಕೆ ಚಾಲನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ನ.೪ ಮತ್ತು ೫ರಂದು ಹಿರಿಯ ಚಲನಚಿತ್ರ ನಟ, ಮಾಜಿ ಉದ್ಯೋಗಿ ಎಸ್. ದೊಡ್ಡಣ್ಣನವರ ನೇತೃತ್ವದಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ನ.೪ ಮತ್ತು ೫ರಂದು ಹಿರಿಯ ಚಲನಚಿತ್ರ ನಟ, ಮಾಜಿ ಉದ್ಯೋಗಿ ಎಸ್. ದೊಡ್ಡಣ್ಣನವರ ನೇತೃತ್ವದಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.
    ಈ ಸಂಬಂಧ ಧಾರ್ಮಿಕ ಆಚರಣೆಗಳೊಂದಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಅಮೃತ್ ಸೇರಿದಂತೆ ಇನ್ನಿತರರು ಮಾತನಾಡಿ, ಕಾರ್ಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಗಮನ ಸೆಳೆಯಲು ಶತಮಾನೋತ್ಸವ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.
ಬೃಹತ್ ವೇದಿಕೆ ನಿರ್ಮಾಣದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಹೊಸಮನೆ ಭವಾನಿ ಶಾಮಿಯಾನ ವತಿಯಿಂದ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಶತಮಾನೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಪಾಲ್ಗೊಳ್ಳುವ ವಿಶ್ವಾಸ ಸಮಿತಿ ಹೊಂದಿದೆ.
    ಶಾಮಿಯಾನ ಮಾಲೀಕ ಭವಾನಿ, ನಿವೃತ್ತ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ವೆಂಕಟೇಶ್, ಸಮಾಜ ಸೇವಕರಾದ ಸಿದ್ದಲಿಂಗಯ್ಯ, ಕೃಷ್ಣೇಗೌಡ, ಶಂಕರ್, ಕೆಂಪಯ್ಯ, ಹನುಮಂತರಾವ್, ಬಸವರಾಜ್, ಡಾಕಪ್ಪ, ನಾಗರಾಜ್, ತ್ರಿವೇಣಿ, ಶೈಲೇಶ್ರೀ, ಮಹೇಶ್ವರಪ್ಪ, ವೆಂಕಟೇಶ್ ಪ್ರಸಾದ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನರಸಿಂಹಚಾರ್ ನಿರೂಪಿಸಿದರು.

Saturday, October 28, 2023

ಕೊಲೆ ಪ್ರಕರಣ : ೮ ಜನರ ಪೈಕಿ ನಾಲ್ವರ ಸೆರೆ

    ಭದ್ರಾವತಿ : ತಾಲೂಕಿನ ಗೌಡರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಶಿವಮೊಗ್ಗ ಟಿಪ್ಪುನಗರ ನಿವಾಸಿ ರೌಡಿಶೀಟರ್, ಸೈಯದ್ ರಾಝಿಕ್ ಅ.೨೦ರಂದು ಗೌಡರಹಳ್ಳಿ ಗ್ರಾಮದಲ್ಲಿ ಕೊಲೆಯಾಗಿದ್ದು, ಈ ಸಂಬಂಧ ತಾಲೂಕಿನ ತಿಪ್ಲಾಪುರ ಕ್ಯಾಂಪ್ ಗ್ರಾಮದ ನಿವಾಸಿಗಳಾದ ಸಮೀರ್, ಜಮೀರ್ ಅಲಿಯಾಸ್ ಸಮೀರ್, ನಾಮತ್ ಅಲಿ ಮತ್ತು ಮಹಮ್ಮದ್ ಶಫಿವುಲಾ ಒಟ್ಟು ೪ ಮಂದಿಯನ್ನು ಬಂಧಿಸಲಾಗಿದೆ.
    ಘಟನೆ ವಿವರ : ಸೈಯದ್ ರಾಝಿಕ್‌ನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಈತನ ಅಕ್ಕ ಗುಲ್ಮಾಜ್ ಬಾನು ಹತ್ಯೆಗೈದ ಒಟ್ಟು ೮ ಜನರ ವಿರುದ್ದ ದೂರು ನೀಡಿದ್ದರು.
    ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಕುಮಾರ್ ಎಸ್. ಬೂಮರೆಡ್ಡಿ ಹಾಗು ಪೊಲೀಸ್ ಉಪಾಧೀಕ್ಷಕ ಕೆ.ಎನ್ ನಾಗರಾಜ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಜಗದೀಶ್ ಸಿ. ಹಂಚಿನಾಳ್ ನೇತೃತ್ವದ ತಂಡ ರಚಿಸಲಾಗಿತ್ತು.
    ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತಂಡ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಅ.೨೫ರಂದು ೮ ಜನರ ಪೈಕಿ ಸಮೀರ್, ಜಮೀರ್ ಅಲಿಯಾಸ್ ಸಮೀರ್, ನಾಮತ್ ಅಲಿ, ಮತ್ತು ಮಹಮ್ಮದ್ ಶಫಿವುಲಾ ಅವರನ್ನು ಬಂಧಿಸಿದೆ. ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
    ೪ ಜನ ಬಂಧಿತರಿಂದ ಕೃತ್ಯ ವೆಸಗಲು ಉಪಯೋಗಿಸಿದ ಮಾರಕಾಸ್ತ್ರಗಳನ್ನು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಠಾಣಾಧಿಕಾರಿ ಶ್ರೀಶೈಲಕೆಂಚಣ್ಣವರ, ಸಿಬ್ಬಂದಿಗಳಾದ ಮಂಜುನಾಥ್, ಈರಯ್ಯ, ಮತ್ತು ಶಿವಪ್ಪ ಪಾಲ್ಗೊಂಡಿದ್ದರು. 

ಶಿರಡಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಸಂಗಮೇಶ್ವರ್ ೬೧ನೇ ಹುಟ್ಟುಹಬ್ಬ

ಭದ್ರಾವತಿ ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ೬೧ನೇ ಹುಟ್ಟುಹಬ್ಬ ಶನಿವಾರ ಶಿರಡಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಆಚರಿಸಿಕೊಂಡರು.
    ಭದ್ರಾವತಿ: ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ೬೧ನೇ ಹುಟ್ಟುಹಬ್ಬ ಶನಿವಾರ ಶಿರಡಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಆಚರಿಸಿಕೊಂಡರು.
    ಕ್ಷೇತ್ರದ ಅಭಿವೃದ್ಧಿಗಾಗಿ ಕುಟುಂಬ ವರ್ಗದವರೊಂದಿಗೆ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಪ್ರಾರ್ಥಿಸುವ ಮೂಲಕ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಹುಟ್ಟುಹಬ್ಬದ ಶುಭಾಶಯ ಕೋರಿದ ಕ್ಷೇತ್ರದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಗಮೇಶ್ವರ್ ತಿಳಿಸಿದ್ದಾರೆ.
    ಶಾಸಕರೊಂದಿಗೆ ಸಹೋದರರಾದ ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬ ವರ್ಗದವರು, ಹಿತೈಷಿಗಳು ಶಿರಡಿ ಶ್ರೀ ಸಾಯಿಬಾಬಾ ಕ್ಷೇತ್ರಕ್ಕೆ ತೆರಳಿದ್ದಾರೆ.
    ಸಂಗಮೇಶ್ವರ್‌ರವರು ಕಳೆದ ಬಾರಿ ತಮ್ಮ ೬೦ನೇ ಹುಟ್ಟುಹಬ್ಬ ಹಳೇನಗರದ ಕನಕಮಂಟಪ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

ಅಂಬೇಡ್ಕರ್-ವಾಲ್ಮೀಕಿ ಭವನ ಪೂರ್ಣಗೊಂಡರೆ ಭದ್ರಾವತಿಗೆ ಮೆರಗು : ಬಿ.ಕೆ ಮೋಹನ್

ಭದ್ರಾವತಿಯಲ್ಲಿ ಶನಿವಾರ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವೀರಶೈವ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ: ಪ್ರಗತಿ ಹಂತದಲ್ಲಿರುವ ಬಿ.ಆರ್ ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಸಮುದಾಯ ಭವನಗಳೆರಡು ಪೂರ್ಣಗೊಂಡರೆ ನಗರಕ್ಕೆ ಮೆರಗು ದೊರೆಯುತ್ತದೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ಅವರು ಶನಿವಾರ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ವೀರಶೈವ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮುಂದಿನ ವರ್ಷ ವಾಲ್ಮೀಕಿ ಜಯಂತಿ ಕಾರ್ಯಕ್ರಮ ವಾಲ್ಮೀಕಿ ಸಮುದಾಯ ಭವನದಲ್ಲಿ ಆಚರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ವರುಷಕೊಮ್ಮೆ ನಡೆಯುವ ಸಮಾಜದ ಕಾರ್ಯಕ್ರಮಕ್ಕೆ ಸಮಾಜ ಬಾಂಧವರೆಲ್ಲರೂ ಭಾಗವಹಿಸುವುದು ಮುಖ್ಯ. ಈ ಕಾರ್ಯಕ್ರಮದ ಯಶಸ್ವಿಯಲ್ಲಿ ಅಧಿಕಾರಿಗಳ ಪಾತ್ರವೂ ಮುಖ್ಯವಾಗಿದ್ದು, ಅಧಿಕಾರಿಗಳ ಪ್ರಯತ್ನ ಶ್ಲಾಘನೀಯ ಎಂದರು.
    ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಸವರಾಜ್ ಬಿ ಆನೇಕೊಪ್ಪ ಮಾತನಾಡಿ, ವಾಲ್ಮೀಕಿ ಸಮಾಜದ ಅಭಿವೃದ್ಧಿಗಾಗಿ ನಗರದಲ್ಲಿ ವಾಲ್ಮೀಕಿ ಉದ್ಯಾನವನ ಹಾಗು ವಾಲ್ಮೀಕಿ ಪುತ್ಥಳಿ ಸ್ಥಾಪಿಸಬೇಕು. ಜೊತೆಗೆ ಪ್ರಗತಿ ಹಂತದಲ್ಲಿರುವ ವಾಲ್ಮೀಕಿ ಸಮುದಾಯ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೋರುವ ಮೂಲಕ ಮನವಿ ಸಲ್ಲಿಸಿದರು.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ತಹಸೀಲ್ದಾರ್ ಕೆ.ಆರ್ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಪೌರಾಯುಕ್ತ ಮನುಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಕಾಂತರಾಜ್, ಮಾಜಿ ಸದಸ್ಯೆ ಲಕ್ಷ್ಮೀದೇವಿ, ದಸಂಸ ಮುಖಂಡರಾದ ಚಿನ್ನಯ್ಯ, ರಂಗನಾಥ್, ಶಿವಬಸಪ್ಪ, ಈಶ್ವರಪ್ಪ, ತಮ್ಮಣ್ಣ, ಚಂದ್ರಣ್ಣ, ವೆಂಕಟೇಶ್ ಉಜ್ಜನಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಸಿದ್ಧಾರ್ಥ ಅಂಧರ ಕೇಂದ್ರದ ಗಾಯಕರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಪ್ಪ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ನಿಲಯ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನೀಡಿದರು.  ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.