ಸುಳ್ಳು ವರದಿ ನೀಡಿರುವ ರಾಜಸ್ವ ನಿರೀಕ್ಷಕ ಸೇವೆಯಿಂದ ವಜಾಗೊಳಿಸಲು ಆಗ್ರಹ
ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ : ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಗ್ರಾಮದ ಸರ್ವೆ ನಂ. ೭೭/೪ರಲ್ಲಿ ೩ ಎಕರೆ ೬ ಗುಂಟೆ ಜಮೀನಿನಲ್ಲಿ ೧ ಎಕರೆ ಜಮೀನು ಸಂಗಪ್ಪ ಬಿನ್ ಸಣ್ಣಪ್ಪರವರ ಹೆಸರಿನಲ್ಲಿ ಮುತ್ತಜ್ಜಿ ನಾಗಮ್ಮರವರು ಅವರ ಮಗಳಾದ ನೀಲಮ್ಮರವರಿಗೆ ಕ್ರಯಕ್ಕೆ ನೀಡಿರುತ್ತಾರೆ. ಉಳಿದ ೧ ಎಕರೆ ೧೮ ಗುಂಟೆ ಜಮೀನು ಈಗಲೂ ಸಹ ನಾಗಮ್ಮರವರ ಹೆಸರಿನಲ್ಲಿಯೇ ಇರುತ್ತದೆ. ಇದರ ವಾರಸುದಾರರು ಸಂಗಪ್ಪ ಬಿನ್ ಸಣ್ಣಪ್ಪರವರೇ ಆಗಿದ್ದು, ವಂಶವೃಕ್ಷಕ್ಕಾಗಿ ಎ.ಸಿ/ಡಿ.ಸಿ ನ್ಯಾಯಾಲಯಗಳಲ್ಲಿ ಪ್ರಕರಣ ನಡೆದು ಸ್ಥಳ ಪರಿಶೀಲನೆ ಮಾಡಿದಾಗ ಅಂದಿನ ರಾಜಸ್ವ ನಿರೀಕ್ಷಕ ಮಾನೋಜಿರಾವ್‌ರವರು ಗ್ರಾಮಸ್ಥರೆಲ್ಲರೂ ನೀಲಕ್ಕನ ತಾಯಿ ನಾಗಮ್ಮ ಇವರ ಕುಟುಂಬದ ವಾರಸುದಾರ ಸಂಗಪ್ಪ ಬಿನ್ ಸಣ್ಣಪ್ಪ ಎಂದು ತಿಳಿಸಿದ್ದು, ಅಲ್ಲದೆ ಅನೇಕ ದಾಖಲೆಗಳು ಇದ್ದರೂ ಸಹ ಸುಳ್ಳು ವರದಿಗಳನ್ನು ಮಾಡಿರುತ್ತಾರೆಂದು ಪ್ರತಿಭಟನಾನಿರತರು ದೂರಿದರು.
ಈ ಸಂಬಂಧ ನಾಡಕಛೇರಿ, ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗಾಧಿಕಾರಿ ಜಿ.ಎಸ್ ಸತ್ಯನಾರಾಯಣರವರು ಶಾಲಾ ದಾಖಲೆಗಳನ್ನು ರಾಜರುಪಡಿಸಿದ್ದಲ್ಲಿ ಸಂಗಪ್ಪ ಬಿನ್ ಸಣ್ಣಪ್ಪರವರ ಕುಟುಂಬದ ವಂಶವೃಕ್ಷ ಮಾಡಿಕೊಡಿ ಎಂದು ತಹಸೀಲ್ದಾರ್/ರಾಜಸ್ವ ನಿರೀಕ್ಷಕ/ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಿಂದಿನ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಅಕ್ರಮ ಕಾರ್ಯ ಮುಚ್ಚಿ ಹಾಕುವ ಉದ್ದೇಶದಿಂದ ಸುಳ್ಳು ವರದಿಗಳನ್ನು ಸೃಷ್ಟಿಸಿರುತ್ತಾರೆಂದು ಆರೋಪಿಸಿದರು.
ಗ್ರಾಮಸ್ಥರು ಹಿಂದಿನ ತಹಸೀಲ್ದಾರ್ ನಾಗರಾಜು ಮತ್ತು ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಮತ್ತು ಉಪ ತಹಸೀಲ್ದಾರ್ ಮಂಜಾನಾಯ್ಕರವರ ಎದುರು ತಿಮ್ಮಕ್ಕ ಎಂಬ ಮಹಿಳೆ ಗ್ರಾಮದಲ್ಲಿ ವಾಸವಾಗಿರುವುದಿಲ್ಲ ಎಂದು ಸಾಕ್ಷಿ ನೀಡಿದ್ದಾರೆ. ಈ ಕುರಿತು ವಿಡಿಯೋ ಸಹ ಸಾಕ್ಷಿ ಇದೆ. ಆದರೂ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಬಡವರಿಗೆ ಮೋಸ, ವಂಚನೆ ಮಾಡಿದ್ದು, ಈತನನ್ನು ರಕ್ಷಿಸಲು ಉಳಿದ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನು ಸೇರಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ನೀಡಲು ತಡಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಮೇಲಾಧಿಕಾರಿಗಳು ತಕ್ಷಣ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಸೇವೆಯಿಂದ ವಜಾಗೊಳಿಸಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು.