Sunday, February 28, 2021

ಕೊರೋನಾ ೩ನೇ ಹಂತದ ಲಸಿಕೆ ಅಭಿಯಾನಕ್ಕೆ ತಾಲೂಕು ಆಸ್ಪತ್ರೆ ಸಿದ್ದತೆ

ಪ್ರತಿ ದಿನ ೨೦೦ ಮಂದಿಗೆ ಲಸಿಕೆ ಹಾಕುವ ಗುರಿ : ಡಾ. ಎಂ.ವಿ ಅಶೋಕ್

ಭದ್ರಾವತಿ, ಫೆ. ೨೮: ಕೊರೋನಾ ಲಸಿಕೆ ೩ನೇ ಹಂತದ ಅಭಿಯಾನಕ್ಕೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಿದ್ದತೆಗಳನ್ನು ಕೈಗೊಂಡಿದ್ದು, ಪ್ರತಿ ದಿನ ೨೦೦ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದರು.
    ಅವರು ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಒಟ್ಟು ೪ ವಿಭಾಗಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಬಾರಿ ಮೊದಲ ವಿಭಾಗದಲ್ಲಿ ೪೯ ರಿಂದ ೫೯ ವರ್ಷದೊಳಗಿನ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿಸಿಕೊಳ್ಳುವವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ದೃಢೀಕರಣ ಪತ್ರ ತರಬೇಕು. ಉಳಿದಂತೆ ೨ನೇ ವಿಭಾಗದಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು. ೩ನೇ ವಿಭಾಗದಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಹಿಂದೆ ಲಸಿಕೆ ಪಡೆಯದವರಿಗೆ ಹಾಗು ೪ನೇ ವಿಭಾಗದಲ್ಲಿ ಇನ್ನಿತರರಿಗೆ ಲಸಿಕೆ ಹಾಕಲು ಸಿದ್ದತೆ ನಡೆಸಲಾಗಿದೆ ಎಂದರು.
    ಲಸಿಕೆ ಹಾಕುವ ಕಾರ್ಯದಲ್ಲಿ ಓರ್ವ ವೈದ್ಯ, ಓರ್ವ ಲಸಿಕೆ ಹಾಕುವವರು, ಸಹಾಯಕರು, ಪರಿಶೀಲನೆ ನಡೆಸುವವರು ಸೇರಿದಂತೆ ಒಟ್ಟು ೧೦ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಸಿಕೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲಾಗುವುದು. ಆದರೆ ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ ಎಂದರು.

ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕ ಉದ್ಘಾಟನೆ

ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಉಪಸ್ಥಿತಿ

ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕದ ಉದ್ಘಾಟನೆ ಭಾನುವಾರ ನಗರದ ಬಿ.ಎಚ್ ರಸ್ತೆ ಕಡದಕಟ್ಟೆ ಐಟಿಐ ಸಮೀಪದ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯಿತು. ಈ ಸಂಬಂಧ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭದ್ರಾವತಿ, ಫೆ. ೨೮: ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕದ ಉದ್ಘಾಟನೆ ಭಾನುವಾರ ನಗರದ ಬಿ.ಎಚ್ ರಸ್ತೆ ಕಡದಕಟ್ಟೆ ಐಟಿಐ ಸಮೀಪದ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯಿತು.
      ಉದ್ಘಾಟನೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ಸುಮಾರು ೫೦ ದಂಪತಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು.
ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಶ್ರೀ ಲಕ್ಷ್ಮೀನರಸಿಂಹ ನೂತನ ಘಟಕ ಉದ್ಘಾಟಿಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಕಾರ್ಯಕರ್ತರನ್ನು ಅಭಿನಂದಿಸುವ ಮೂಲಕ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು.  
    ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ರಾಮ್‌ಸೇನಾ ರಾಜ್ಯ ಕಾರ್ಯದರ್ಶಿಗಳಾದ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ, ಮುಖಂಡ ಬಾಬು ಶಶಿಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
           ನೂತನ ಅಧ್ಯಕ್ಷರು ಪದಾಧಿಕಾರಿಗಳು:
  ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ಪ್ರವೀಣ್‌ಕುಮಾರ್, ರಮೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್, ಕಾರ್ತಿಕ್, ಸೋಷಿಯಲ್ ಮೀಡಿಯಾ ಮೇಲ್ವಿಚಾರಕರಾಗಿ ಪವನ್, ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್, ರೋಹಿತ್, ಕಾರ್ಯದರ್ಶಿಗಳಾಗಿ ಸುನಿಲ್, ಸಂಜಯ್, ಪ್ರಭಾಕರ್, ಆನಂದ್, ರಿತೀನ, ಅಭಿ, ಲೋಕೇಶ್ ಮತ್ತು ದರ್ಶನ್ ಪದಗ್ರಹಣ ಸ್ವೀಕರಿಸಿದರು.



Saturday, February 27, 2021

ಕ್ರಿಮಿನಲ್ ಪ್ರಕರಣಗಳಿಗೆ ಜಾಮೀನು ಕೊಡಿಸುತ್ತಿದ್ದ ದಲ್ಲಾಳಿಗೆ ಶಿಕ್ಷೆ

ದಲ್ಲಾಳಿ ಕುಮಾರ
    ಭದ್ರಾವತಿ, ಫೆ. ೨೭: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಜಾಮೀನುದಾರರನ್ನು ಒದಗಿಸಿಕೊಡುತ್ತಿದ್ದ ದಲ್ಲಾಳಿಯೋರ್ವನಿಗೆ ೫ ತಿಂಗಳು ಸಾದ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
   ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಮರಡಿ ನಿವಾಸಿ ಕುಮಾರ ಎಂಬಾತ ಶಿಕ್ಷೆಗೆ ಒಳಗಾಗಿದ್ದಾನೆ. ಈತ ನ್ಯಾಯಾಲಯದ ಆವರಣದಲ್ಲಿ ಕ್ರಿಮಿನಲ್ ಪ್ರಕರಣಗಳ ಆರೋಪಿಗಳಿಗೆ ಜಾಮೀನು ಕೊಡಿಸುವುದನ್ನು ರೂಢಿಗತ ಮಾಡಿಕೊಂಡಿದ್ದು, ಈತನಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಲಯದ ನ್ಯಾಯಾಧೀಶರಾದ ಹೇಮಾವತಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ

ಮೊದಲ ಪಂದ್ಯ ಎಂಜೆಎ-ಮಾರುತಿ ಟೈಗರ್‍ಸ್ ತಂಡಗಳ ನಡುವೆ ಸೆಣಸಾಟ


ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ಮೊದಲ ಪಂದ್ಯ ಎಂಜೆಎ-ಮಾರುತಿ ಟೈಗರ್‍ಸ್ ತಂಡಗಳ ನಡುವೆ ಸೆಣಸಾಟ ನಡೆಯಿತು.
   ಭದ್ರಾವತಿ, ಫೆ. ೨೭: ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಪ್ರಪಥಮ ಬಾರಿಗೆ ನಗರದಲ್ಲಿ ನಡೆಯುತ್ತಿರುವ ಮ್ಯಾಟ್ ಒಳಗೊಂಡ ಪ್ರೊ ಕಬಡ್ಡಿ ಪಂದ್ಯಾವಳಿ ಇದಾಗಿದ್ದು, ಮೊದಲ ಪಂದ್ಯ ಮಾರುತಿ ಟೈಗರ್‍ಸ್ ಮತ್ತು ಎಂಜೆಎ ತಂಡಗಳ ನಡುವೆ ಸೆಣಸಾಟ ನಡೆಯಿತು. ಪಂದ್ಯಾವಳಿ ಒಟ್ಟು ೮ ತಂಡಗಳು ಸೆಣಸಾಟ ನಡೆಸಲಿವೆ. ನಗರದ ವಿವಿಧ ಭಾಗಗಳಿಂದ ಪಂದ್ಯಾವಳಿ ವೀಕ್ಷಣೆಗೆ ಕಬಡ್ಡಿ ಅಭಿಮಾನಿಗಳು, ಕ್ರೀಡಾಪಟುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೀಕ್ಷಣೆಗೆ ಬೃಹತ್ ಎಲ್‌ಸಿಡಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
   ಉದ್ಘಾಟನಾ ಸಭಾರಂಭದಲ್ಲಿ ವಿವಿಧ ಕಬಡ್ಡಿ ತಂಡಗಳ ಮಾಲೀಕರಾದ ಮಾರುತಿ ಮೆಡಿಕಲ್ ಆನಂದ್, ಬಾಲಕೃಷ್ಣ, ಪೊಲೀಸ್ ಉಮೇಶ್, ಮಂಗೋಟೆ ರುದ್ರೇಶ್, ಮಣಿ ಎಎನ್‌ಎಸ್ ಹಾಗು ಹಿರಿಯ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಕ್ಲಬ್ ಅಧ್ಯಕ್ಷ ಎಚ್.ಎನ್ ಕೃಷ್ಣೇಗೌಡ, ಕಬ್ಲ್ ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಸಂಚಾಲಕರಾದ ಎಸ್.ಎನ್ ಸಿದ್ದಯ್ಯ, ವೈ. ವಸಂತಕುಮಾರ್, ಜಯರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಲಯನ್ಸ್ ಕ್ಲಬ್ ಶುಗರ್ ಟೌನ್ ೩೪ ವರ್ಷಗಳ ಸಾರ್ಥಕ ಸೇವೆ

ಫೆ.೨೮ರಂದು 'ಅನನ್ಯ' ಪ್ರಾಂತೀಯ ಸಮ್ಮೇಳನ : ಕೆ. ಅನಂತಕೃಷ್ಣನಾಯಕ್

ಭದ್ರಾವತಿಯ ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಮಾತನಾಡಿದರು.
    ಭದ್ರಾವತಿ, ಫೆ. ೨೭: ಹಲವು ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಫೆ.೨೮ರಂದು ಪ್ರಾಂತೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಕೈಗೊಂಡಿದೆ ಎಂದು ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ತಿಳಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೭ ಆಗಸ್ಟ್ ೧೯೮೭ರಲ್ಲಿ ಆರಂಭಗೊಂಡ ಸ್ಥಾಪನೆಗೊಂಡ ಕ್ಲಬ್ ಜನಸೇವೆಯೇ ಜನಾರ್ಧನ ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಹಲವು ಸೇವಾ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶೇಷವಾಗಿ ಸುಮಾರು ೧೫ ವರ್ಷಗಳ ಕಾಲ ನೇತ್ರ ಚಿಕಿತ್ಸಾ ಶಿಬಿರ ನಡೆಸಿಕೊಂಡು ಬರುವ ಜೊತೆಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಹುಟ್ಟುಹಾಕುವಲ್ಲಿ ನಾಂದಿಯಾಗಿದೆ. ಅಲ್ಲದೆ ಲಯನ್ಸ್ ಎಜುಕೇಷನ್ ಟ್ರಸ್ಟ್ ಎಂಬ ಅಂಗಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಸುಮಾರು ೩೨ ವರ್ಷಗಳಿಂದ ವಿಕಲಚೇತನ ಮಕ್ಕಳಿಗಾಗಿ 'ತರಂಗ ಕಿವುಡು, ಮೂಗ ಮಕ್ಕಳ ಶಾಲೆ' ನಡೆಸಿಕೊಂಡು ಬರಲಾಗುತ್ತಿದೆ. ಒಟ್ಟಾರೆ ಕ್ಲಬ್ ಸಮಾಜಕ್ಕೆ ತನ್ನದೇ ಆದ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.
   ತಾವು ಪ್ರಾಂತೀಯ ಅಧ್ಯಕ್ಷರಾದ ನಂತರ ೧೦ ಕ್ಲಬ್‌ಗಳ ಜೊತೆಗೆ ಹೊಸದಾಗಿ ೩ ಕ್ಲಬ್‌ಗಳನ್ನು ರಚಿಸಲಾಗಿದೆ. ಪ್ರಸ್ತುತ ೪೩೫ ಸದಸ್ಯರಿದ್ದು, ಭವಿಷ್ಯದಲ್ಲಿ ಈ ಸದಸ್ಯರು ಮತ್ತಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಬೇಕೆಂಬ ಹಾಗು ಸದಸ್ಯರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ 'ಅನನ್ಯ' ಹೆಸರಿನಲ್ಲಿ ಪ್ರಾಂತೀಯ ಸಮ್ಮೇಳನ ಫೆ.೨೮ರಂದು ಸಂಜೆ ೪ ಗಂಟೆಗೆ ನಡೆಸಲಾಗುತ್ತಿದೆ.  ಈ ಸಮ್ಮೇಳನದಲ್ಲಿ ವ್ಯಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಹಾಗು ಡಾ.ಕೆ.ಪಿ ಪುತ್ತುರಾಯ ಪಾಲ್ಗೊಳ್ಳಲಿದ್ದಾರೆ. ಪಿಡಿಜಿ ದಿವಾಕರ್, ವಿಡಿಜಿ-೧ ವಿಶ್ವನಾಥಶೆಟ್ಟಿ, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ರಿಜಿಯನ್ ಫೈಲಟ್ ಎಂ.ಎಸ್ ಜರ್ನಾಧನ ಅಯ್ಯಂಗಾರ್, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ, ಕಾರ್ಯದರ್ಶಿ ತಮ್ಮೇಗೌಡ ಮತ್ತು ಖಜಾಂಚಿ ಎಂ.ಸಿ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸುಮಾರು ೪೫೦ ರಿಂದ ೫೦೦ ಲಯನ್ಸ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಮಾಜಮುಖಿ ಚಿಂತನೆಗಳು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಈ ನಿಟ್ಟಿನಲ್ಲಿ ಆರಂಭಗೊಂಡ ಕ್ಲಬ್‌ಗೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧ ಎಕರೆ, ೨೦ ಗುಂಟೆ ಜಾಗವನ್ನು ಲೀಸ್ ಆಧಾರದಲ್ಲಿ ಕ್ಲಬ್‌ಗೆ ನೀಡಿದ್ದು, ೧೯೯೦ರಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಕ್ಲಬ್ ನಿರ್ಮಿಸಿಕೊಂಡಿತು. ಇದರ ಜೊತೆಗೆ ಸರ್‌ಎಂವಿ ಸ್ಪೂರ್ತಿವನ ಹಾಗು ಕೋಟಾ ಶಿವರಾಮಕಾರಂತ ವನ ಎಂಬ ಎರಡು ವನಗಳನ್ನು ರೂಪಿಸಲಾಗಿದ್ದು, ಇದೀಗ ಕ್ಲಬ್ ಆವರಣದಲ್ಲಿ ಹಸಿರು ಕಂಗೊಳಿಸುತ್ತಿದೆ. ಇದು ಕ್ಲಬ್‌ನ ಮತ್ತೊಂದು ಮಹತ್ವದ ಕಾರ್ಯವಾಗಿದೆ ಎಂದರು.
   ಇತ್ತೀಚೆಗೆ ಸುಮಾರು ೧೮ ಲಕ್ಷ ರು. ವೆಚ್ಚದಲ್ಲಿ ಕ್ಲಬ್‌ನ ಕಟ್ಟಡ ಹಾಗು ತರಂಗ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
  ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದಪೈ, ಕಾರ್ಯದರ್ಶಿ ತಮ್ಮೇಗೌಡ, ಜಿ.ಎಸ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, February 26, 2021

ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್

   
   ಭದ್ರಾವತಿ, ಫೆ. ೨೬: ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಮುಖ ಪಾತ್ರವಹಿಸಿದ್ದು, ಅಲ್ಲದೆ ನಾಡಿನ ಎಲ್ಲಾ ಧರ್ಮ, ಜಾತಿ, ಜನಾಂಗಗಳ ಏಳಿಗಾಗಿ ಶ್ರಮಿಸುವ ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಮೇಲಿನ ಅಭಿಮಾನದ ಹಿನ್ನಲೆಯಲ್ಲಿ ಅವರನ್ನು ವಿಶೇಷವಾಗಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿನಂದಿಸಲು ಜಿಲ್ಲೆಯ ಎಲ್ಲಾ ತಾಲೂಕಿನ ಸಮಸ್ತ ಅಭಿಮಾನ ಬಳಗ ಮುಂದಾಗಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ತಿಳಿಸಿದರು.   
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.೨೮ ಹಾಗು ಮಾ.೧ರಂದು ಶಿವಮೊಗ್ಗ ವಿನೋಬನಗರದ ಹಳೇ ಜೈಲು ಆವರಣದಲ್ಲಿ ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ 'ನಮ್ಮೊಲುಮೆ.. ಅಭಿಮಾನದ ಅಭಿನಂದನೆ' ಭಾವಾಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
      ಹುಟ್ಟುಹಬ್ಬ ವಿಶೇಷವಾಗಿ ಆಚರಣೆ :
    ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಮಾತನಾಡಿ, ನಗರದಲ್ಲಿ ಬಿ.ವೈ.ರಾಘವೇಂದ್ರ ಹಾಗೂ ಬಿ.ಎಸ್ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಕಳೆದ ೧೩ ವರ್ಷಗಳಿಂದಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರು ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಹುಟ್ಟುಹಬ್ಬ ವಿಶೇಷವಾಗಿ ಅಚರಿಸಿಕೊಂಡು ಬರಲಾಗುತ್ತಿದೆ. ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ, ರೈತರಿಗೆ ತೆಂಗಿನ ಸಸಿ ವಿತರಣೆ, ಹಳೇನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು, ಹಣ್ಣು ಬ್ರೆಡ್ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಸೂಡಾ ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಹಟ್ಟಿಚಿನ್ನದ ಗಣಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಟಿ.ಎಸ್ ದುಗ್ಗೇಶ್, ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪಕ್ಷದ ಪ್ರಮುಖರಾದ ಜಿ. ಆನಂದಕುಮಾರ್, ಕೃಷ್ಣ ಛಲವಾದಿ, ಅವಿನಾಶ್, ವಿವಿಧ ಸಮಾಜಗಳ ಮುಖಂಡರಾದ ಆರ್. ಮಹೇಶ್‌ಕುಮಾರ್, ಎಸ್. ಮಂಜುನಾಥ್, ಡಿ.ಕೆ ರಾಘವೇಂದ್ರರಾವ್, ಎ.ಟಿ ರವಿ, ವೀರಭದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಮ್ ಆದ್ಮಿ ಪಾರ್ಟಿಯಿಂದ ದೇಶದಲ್ಲಿ ಹೊಸ ಬದಲಾವಣೆ, ಹೊಸ ರಾಜಕೀಯ ಸ್ವರೂಪ

೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ


ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದ ವತಿಯಿಂದ ೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಫೆ. ೨೬: ಆಮ್ ಆಮ್ ಆದ್ಮಿ ಪಾರ್ಟಿ ದೇಶದಲ್ಲಿ ಹೊಸ ಬದಲಾವಣೆ ತರಬೇಕು. ರಾಜಕೀಯ ಸ್ವರೂಪ ಬದಲಾಗಬೇಕೆಂಬ ಉದ್ದೇಶದಿಂದ ಜನ್ಮತಾಳಿದ ಪಕ್ಷವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ ತಿಳಿಸಿದರು.
   ಅವರು ನಗರದ ಮಿಲ್ಟ್ರಿಕ್ಯಾಂಪ್‌ನ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಪಕ್ಷದ ಹೋರಾಟ ಬಿಜೆಪಿ, ಕಾಂಗ್ರೆಸ್ ವಿರುದ್ದವಲ್ಲ ಬದಲಾಗಿ ಹಣ, ಜಾತಿ, ಧರ್ಮ ರಾಜಕಾರಣದ ವಿರುದ್ಧ ಹಾಗು ಶೀಲಕೆಟ್ಟ, ನೀತಿಕೆಟ್ಟ ರಾಜಕಾರಣ ವಿರುದ್ಧವಾಗಿದೆ. ಇವುಗಳನ್ನು ಸೋಲಿಸುವ ಮೂಲಕ ದೇಶದ ಜನರು ಆಮ್ ಆದ್ಮಿ ಪಾರ್ಟಿ ಬೆಂಬಲಿಸುತ್ತಿದ್ದಾರೆ ಎಂದರು.
   ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಪ್ರತಿಯೊಂದರಲ್ಲೂ ಪಾರದರ್ಶಕತೆ, ಆಡಳಿತ ವ್ಯವಸ್ಥೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ತಲುಪಿದೆ. ಸರ್ಕಾರಿ ಶಾಲಾ-ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳು ಸಾಕಷ್ಟು ಬದಲಾವಣೆಗಳಾಗಿವೆ. ಈ ಮಾದರಿ ವ್ಯವಸ್ಥೆಯನ್ನು ದೇಶಾದ್ಯಂತ ತರಬೇಕೆಂಬುದು ಪಕ್ಷದ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನವಣೆಗಳು ಸೇರಿದಂತೆ ಸಾರ್ವಜನಿಕ ಚುನಾವಣೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ನಡೆಸಲಿದೆ ಎಂದರು.
   ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಮಾತನಾಡಿ, ಇಂದು ದೇಶದಲ್ಲಿ ರಾಜಕೀಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಜನಸಾಮಾನ್ಯರ ವಿರುದ್ಧ ಹಲವಾರು ಕಾಯ್ದೆಗಳನ್ನು ರೂಪಿಸುವ ಮೂಲಕ ಶೋಷಿಸಲಾಗುತ್ತಿದೆ. ರೈತರು, ಕಾರ್ಮಿಕರ ವಿರುದ್ಧ ಮಾರಕವಾದ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ. ಎಲ್ಲಾ ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ದೇಶದ ಜನರಲ್ಲಿ ಸಮಾನತೆ ಪರಿಕಲ್ಪನೆ ಆಧಾರ ಮೇಲೆ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಆಲೋಚನೆ ಬಿತ್ತುವ ಬದಲು ಜಾತಿ, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿನಾಶದ ಅಂಚಿಗೆ ಸಾಗಿದೆ. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಇದೀಗ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕಾಗಿದೆ ಎಂದರು.
   ಪಕ್ಷದ ರಾಜ್ಯ ಸಂಘಟನಾ ಸಂಯೋಜಕ ಗೋಪಾಲ್, ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಪಿ ದರ್ಶನ್ ಜೈನ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
   ಎಂಪಿಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್ ಚಂದ್ರಶೇಖರ್, ಉದ್ಯಮಿ ಶ್ರೀನಿವಾಸ್, ಪಕ್ಷದ ಮುಖಂಡರಾದ ಪರಮೇಶ್ವರಚಾರ್, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ಜಾವಿದ್, ಪೀಟರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೋಸೆಫ್ ನಿರೂಪಿಸಿದರು. ಬಿ.ಕೆ ರಮೇಶ್ ಸ್ವಾಗತಿಸಿದರು. ಎನ್.ಪಿ ಜೋಸೆಫ್ ವಂದಿಸಿದರು. ವಿಶೇಷವಾಗಿ ಮಕ್ಕಳಿಂದ ಪಕ್ಷದ ೭ನೇ ವರ್ಷದ ಸಂಸ್ಥಾಪನಾ ದಿನಕ್ಕೆ ಚಾಲನೆ ನೀಡಲಾಯಿತು.